ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರರನ್ನು ಇರಿಸಲು 1923 ರಲ್ಲಿ ಬ್ರಿಟಿಷರು ನಿರ್ಮಿಸಿದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹವು ದೇಶದ ಅತಿದೊಡ್ಡ ಜೈಲುಗಳಲ್ಲಿ ಒಂದಾಗಿದೆ. 100 ವರ್ಷಗಳ ಹಳೆಯದಾದ ಈ ಜೈಲು ನಮ್ಮ ರಾಷ್ಟ್ರದ ಇತಿಹಾಸದ ಭಾಗವಾಗಿದೆ.
ಬೆಳಗಾವಿಯಿಂದ 6 ಕಿಮೀ ದೂರದಲ್ಲಿ, ಹಿಂಡಲಗಾ ಜೈಲನ್ನು ಸುಮಾರು 99 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. 99 ಎಕರೆಯಲ್ಲಿ 30 ಎಕರೆಯಷ್ಟು ಭೂಮಿಯನ್ನು ಕೃಷಿ ಮತ್ತು ಜಾನುವಾರುಗಳಿಗೆ ಮೇಯಿಸಲು ಮೀಸಲಿಡಲಾಗಿದೆ. ಇದು ಹಸಿರು ಸೆರೆಮನೆಯಾಗಿದ್ದು, ವಿಭಾಗಗಳ ನಡುವಿನ ತೆರೆದ ಸ್ಥಳಗಳಲ್ಲಿ ಹೇರಳವಾದ ಮರಗಳು ಮತ್ತು ಸಸ್ಯವರ್ಗವನ್ನು ಹೊಂದಿದೆ. ಈ ಪರಿಸರವನ್ನು ಕಾಪಾಡಿಕೊಳ್ಳಲು ಸಿಬ್ಬಂದಿ ಮತ್ತು ಕೈದಿಗಳ ಪರಿಶ್ರಮವಿದೆ.
ಜೈಲು ಎರಡು ದೊಡ್ಡ ಸಂಕೀರ್ಣಗಳನ್ನು ಒಳಗೊಂಡಿದೆ. ಒಂದು ಸಂಕೀರ್ಣವು ಪುರುಷ ಅಪರಾಧಿಗಳಿಗೆ ಬ್ಯಾರಕ್ ಗಳನ್ನು ಹೊಂದಿದೆ. ಇನ್ನೊಂದು ವಿಚಾರಣಾಧೀನ ಕೈದಿಗಳಿಗೆ. ಅಪರಾಧಿಗಳ ಕೆಲಸಕ್ಕೆ ನೇಕಾರಿಕೆ, ಮತ್ತು ಟೈಲರಿಂಗ್ ಸೌಲಭ್ಯವಿದೆ. ಅಂಡರ್ ಟ್ರಯಲ್ ವಿಭಾಗದಲ್ಲಿ ಸೆಲ್ ಗಳು ಮತ್ತು ಬ್ಯಾರಕ್ ಗಳಿವೆ. ಇಲ್ಲಿ ಗ್ರಂಥಾಲಯ, ಮರಗೆಲಸ ವಿಭಾಗ, ಟೈಲರಿಂಗ್ ಇದೆ. ಹೆಚ್ಚಿನ ಭದ್ರತೆಯ ಕೈದಿಗಳಿಗಾಗಿ ಕೆಲವು ವಿಶೇಷ ಕೋಣೆಗಳು ಸಹ ಇವೆ.
ಈ ಜೈಲಿನಲ್ಲಿ ಸುಮಾರು 1,200 ಕೈದಿಗಳನ್ನು ಇರಿಸಬಹುದಾಗಿದೆ. ಇದಲ್ಲದೆ, ಮರಣದಂಡನೆ ಶಿಕ್ಷೆಗೊಳಗಾದ ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಕರ್ನಾಟಕದ ಏಕೈಕ ಜೈಲು ಇದಾಗಿದೆ. ಆದರೆ, ಕಳೆದ ನಾಲ್ಕು ದಶಕಗಳಲ್ಲಿ ಈ ಜೈಲಿನಲ್ಲಿ ಯಾರಿಗೂ ಮರಣದಂಡನೆ ವಿಧಿಸಿಲ್ಲ. ಜೈಲಿನ ಮೂರು ಸ್ಥಳಗಳಲ್ಲಿ ಗಲ್ಲುಶಿಕ್ಷೆ ವಿಧಿಸಬಹುದಾಗಿದೆ.
ಜೈಲಿನಲ್ಲಿ ಗಲ್ಲಿಗೇರಿದ ಕೊನೆಯ ವ್ಯಕ್ತಿ ಗೋಕಾಕ್ ನ ಹನುಮಪ್ಪ ಮರಿಯಾಲ್ – ನವೆಂಬರ್ 9, 1983. ಅದಕ್ಕೂ ಮೊದಲು, ಆರು ಜನರನ್ನು 1976 ರಲ್ಲಿ ಮತ್ತು ಐವರನ್ನು 1978 ರಲ್ಲಿ ಗಲ್ಲಿಗೇರಿಸಲಾಯಿತು. ಹಿಂಡಲಗಾ ಜೈಲಿನಲ್ಲಿ ನಾಲ್ವರು ವೀರಪ್ಪನ್ ಗ್ಯಾಂಗ್ ಸದಸ್ಯರು ಸೇರಿದಂತೆ ಮರಣದಂಡನೆ ಶಿಕ್ಷೆಗೆ ಒಳಗಾದ ಹಲವಾರು ಅಪರಾಧಿಗಳು ಇದ್ದಾರೆ. ಸರಣಿ ಅತ್ಯಾಚಾರಿ ಮತ್ತು ಹಂತಕ ಉಮೇಶ್ ರೆಡ್ಡಿ ಸೇರಿದಂತೆ ಕುಖ್ಯಾತ ರೌಡಿಗಳು ಮತ್ತು ಶಂಕಿತ ಸಿಮಿ ಕಾರ್ಯಕರ್ತರು ಸಹ ಇದೇ ಜೈಲಿನಲ್ಲಿದ್ದಾರೆ. ಜೈಲಿನಲ್ಲಿರುವ 27 ಕೈದಿಗಳು ಮರಣದಂಡನೆಗೆ ಗುರಿಯಾಗಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ. ಇವರ ಕ್ಷಮಾಪಣಾ ಅರ್ಜಿಗಳು ಇನ್ನೂ ನ್ಯಾಯಾಲಯದ ಮುಂದೆ ಮತ್ತು ಕೆಲವು ರಾಷ್ಟ್ರಪತಿಗಳ ಮುಂದೆ ಇವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


