ಮೈಸೂರು: ಪತ್ನಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ಮೈಸೂರಿನ ರಾಜೀವ್ ನಗರದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನವೀದಾ ಮೃತ ದುರ್ದೈವಿಯಾಗಿದ್ದು, ಅಕ್ಬರ್ ಅಲಿ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.
ಆರೋಪಿ ಪತಿ ಅಕ್ಬರ್ ಅಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಡ್ಯ ಮೂಲದ ಅಕ್ಬರ್ ಅಲಿ ಆಟೋ ಚಾಲಕನಾಗಿದ್ದು, ನವೀದಾ-ಅಕ್ಬರ್ ಅಲಿ ಮದುವೆ ಆಗಿ 13 ವರ್ಷಗಳ ದಾಂಪತ್ಯದಲ್ಲಿ, ದಂಪತಿಗೆ ಮೂವರು ಮಕ್ಕಳಿದ್ದು, ಮೈಸೂರಿನ ರಾಜೀವ್ ನಗರದಲ್ಲಿ ನೆಲೆಸಿದ್ದರು.
ಈ ಹಿಂದೆ ಪತಿಯಾದ ಅಕ್ಬರ್ ಅಲಿ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗ, ಪತ್ನಿ ನವೀದಾ ತನ್ನ ತವರು ಮನೆಯವರ ನೆರವಿನಿಂದ ಪತಿಗೆ ಚಿಕಿತ್ಸೆ ಕೊಡಿಸಿದ್ದಳು. ಅಕ್ಬರ್ ಅಲಿ ಗುಣಮುಖನಾಗಿ ಬಂದ ಮೇಲೆ, ಗೂಡ್ಸ್ ಆಟೋ, ಪ್ರಾವಿಷನ್ ಸ್ಟಾಲ್, ಆಟೋ ಮೊಬೈಲ್ಸ್ ಅಂಗಡಿ ಹೀಗೆ ಹಲವು ವ್ಯಾಪಾರ ಮಾಡಲು ಆರಂಭಿಸಿದನು. ಇದಕ್ಕಾಗಿ ಹಲವೆಡೆ ಸಾಲ ಮಾಡಿದ್ದನು. ಮತ್ತು ನವೀದಾ ತವರು ಮನೆಯವರು ಕೂಡ ಅಕ್ಬರ್ ಅಲಿಗೆ ಆರ್ಥಿಕ ಸಹಾಯ ಮಾಡುತ್ತಿದ್ದರು.
ಪತ್ನಿ ನವೀದಾ ಸಣ್ಣ ಅಂಗಡಿ ನಡೆಸುತ್ತಿದ್ದು, ಹಲವು ಬಾರಿ ಪತಿಯ ಸಾಲ ತೀರಿಸಿದ್ದಳು. ಆದರು ಕೂಡ ಅಕ್ಬರ್ ಅಲಿ ಮೇಲಿಂದ ಮೇಲೆ ಸಾಲ ಮಾಡುತ್ತಿದ್ದನು. ಈ ಸಾಲವನ್ನು ತೀರಿಸಲು ಹಣ ನೀಡು ಎಂದು ಅಕ್ಬರ್ ಅಲಿ ಪತ್ನಿ ನವೀದಾಗೆ ಕಿರುಕುಳ ಕೊಡುತ್ತಿದ್ದನು ಎನ್ನಲಾಗಿದೆ.


