ತುಮಕೂರು: ವೈದ್ಯಕೀಯ ಕ್ಷೇತ್ರವು ಸದಾ ಬದಲಾಗುತ್ತಿರುತ್ತದೆ, ಇಲ್ಲಿ ಜ್ಞಾನಕ್ಕೆ ಕೊನೆಯಿಲ್ಲ. ವೈದ್ಯಕೀಯ ವಿದ್ಯಾರ್ಥಿಗಳು ಕೇವಲ ಪದವಿಗಷ್ಟೇ ಸೀಮಿತವಾಗದೆ, ಹೊಸ ಸಂಶೋಧನೆ ಮತ್ತು ವೈದ್ಯಕೀಯ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸದಾ ಜಾಗೃತರಾಗಿರಬೇಕು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಮಹಾಸ್ವಾಮೀಜಿ ಕರೆ ನೀಡಿದರು.
ನಗರದ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮೆಡ್‌ಸ್ಪಾರ್ಕ್’ ವಿದ್ಯಾರ್ಥಿ ಸಿ.ಎಂ.ಇ ಮತ್ತು ‘ಫಾರ್ಮಕ್—ಓ–ಸಿಲೆನ್ಸ್’ ಅಂತರ ಕಾಲೇಜು ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿ ವಿದ್ಯಾರ್ಥಿಗಳಿಗೆ ಸದಾ ಹೊಸತನ್ನು ಕಲಿಸುವ ಉತ್ಸಾಹ ಹೊಂದಿರುವ ನಮ್ಮ ಸಿಬ್ಬಂದಿ ಜ್ಞಾನವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಹಾಗೆಯೇ ಸಿಬ್ಬಂದಿಯು ನಿತ್ಯವೂ ಅಪ್ಡೇಟ್ ಆಗುತ್ತಿರಬೇಕು ಎಂದರು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್. ಸಚ್ಚಿದಾನಂದ ಮಾತನಾಡಿ, ವೈದ್ಯಕೀಯ ವೃತ್ತಿಯು ಅತ್ಯಂತ ಪವಿತ್ರವಾದುದು. ವಿದ್ಯಾರ್ಥಿಗಳು ತಾಂತ್ರಿಕ ಕೌಶಲಗಳ ಜೊತೆಗೆ ವೃತ್ತಿಪರ ನೀತಿ ಸಂಹಿತೆಯನ್ನು ರೂಪಿಸಿಕೊಳ್ಳಬೇಕು. ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸುವುದು ಮತ್ತು ಮಾನವೀಯತೆಯಿಂದ ಸೇವೆ ಸಲ್ಲಿಸುವುದು ಒಬ್ಬ ಉತ್ತಮ ವೈದ್ಯನ ಆದ್ಯ ಕರ್ತವ್ಯವಾಗಿದೆ. ಇಂತಹ ಶೈಕ್ಷಣಿಕ ಸಮಾವೇಶಗಳು ನಿಮ್ಮಲ್ಲಿ ಸೇವಾ ಮನೋಭಾವ ಮತ್ತು ಜವಾಬ್ದಾರಿಯನ್ನು ಹೆಚ್ಚಿಸಲಿ ಎಂದು ತಿಳಿಸಿದರು.
ಕಾರ್ಯಕಾರಿ ನಿರ್ದೇಶಕ ಡಾ.ಜಯವಿಭವ ಸ್ವಾಮಿ, ವೈದ್ಯಕೀಯ ಸೇವೆಗಳ ಕಾರ್ಯದರ್ಶಿ ಟಿ.ಎಂ. ಸ್ವಾಮಿ, ನಿರ್ದೇಶಕ ಡಾ. ಪರಮೇಶ್ ಎಸ್., ಪ್ರಾಚಾರ್ಯರಾದ ಡಾ. ಶಾಲಿನಿ ಎಂ., ವೈದ್ಯಕೀಯ ಅಧೀಕ್ಷಕ ಡಾ. ನಿರಂಜನ ಮೂರ್ತಿ ಬಿ., ಸಿಇಒ ಡಾ. ಸಂಜೀವಕುಮಾರ್ ಹಾಗೂ ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಇಂದುಶ್ರೀ ಟಿ. ಉಪಸ್ಥಿತರಿದ್ದರು. ಸಮಾವೇಶದಲ್ಲಿ ರಾಜ್ಯದ ವಿವಿಧ 15ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಫಾರ್ಮಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರಿಯದರ್ಶಿನಿ ಜಿ. ಸೇರಿದಂತೆ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


