ಪೊಲೀಸರ ವಶದಲ್ಲಿದ್ದ ಕೊಲೆ ಆರೋಪಿ ಒಬ್ಬ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ಈ ಬಗ್ಗೆ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.
ಮಧ್ಯಪ್ರದೇಶ ಮೂಲದ ಕೊಲೆ ಆರೋಪಿ ಒಬ್ಬನನ್ನು ಗುಜರಾತ್ ರಾಜ್ಯಕ್ಕೆ ಕರೆ ತಂದಿದ್ದರು. ಈ ವೇಳೆ ಆರೋಪಿಯ ಜೊತೆ ಗುಜರಾತ್ ನ ಪಾವಗಡ ಎಂಬ ಪುಣ್ಯ ಕ್ಷೇತ್ರದಲ್ಲಿ ಇರುವ ಮಹಾಕಾಳಿಯ ದರ್ಶನ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಹೇಗಿದ್ದರೂ ಇಷ್ಟು ದೂರ ಬಂದಿದ್ದೇವೆ, ತಾಯಿಯ ಆಶೀರ್ವಾದ ಪಡೆದೇ ಹೋಗೋಣ ಎಂದು ಪೊಲೀಸರು ನಿರ್ಧರಿಸಿದ್ದರು. ಆದರೆ, ಪೊಲೀಸರ ಈ ದೇಗುಲ ದರ್ಶನವೇ ದೊಡ್ಡ ಎಡವಟ್ಟಿಗೆ ಕಾರಣವಾಗಿದೆ.
ಮಹಾಕಾಳಿಯ ದರ್ಶನ ಪಡೆಯಲು ದೇಗುಲಕ್ಕೆ ತೆರಳಿದ ವೇಳೆ ಭಾರೀ ಜನ ಜಂಗುಳಿ ಇತ್ತು. ಈ ಸಂದರ್ಭವನ್ನು ತನ್ನ ಲಾಭಕ್ಕೆ ಬಳಸಿಕೊಂಡ ಕೊಲೆ ಆರೋಪಿ, ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಈ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಕಾನೂನು ನಿಯಮಗಳ ಪ್ರಕಾರ ಯಾವುದೇ ವಿಚಾರಣಾಧೀನ ಕೈದಿಯನ್ನು ಪೊಲೀಸರು ನೇರವಾಗಿ ಜೈಲಿನಿಂದ ಕೋರ್ಟ್‌ಗೆ ಅಥವಾ ಪೊಲೀಸ್ ಠಾಣೆಗೆ ಮಾತ್ರ ಕರೆ ತರಬೇಕು. ಆದರೆ, ಪೊಲೀಸರು ಕೋರ್ಟ್‌ಗೆ ಹೋಗುವ ಮಾರ್ಗ ಮಧ್ಯೆ ಗುಜರಾತ್‌ನಲ್ಲಿ ದೇಗುಲ ದರ್ಶನಕ್ಕೆ ಮುಂದಾಗಿದ್ದು, ಇದೀಗ ಅವರಿಗೇ ಮುಳುವಾಗಿದೆ.
ಪರಾರಿಯಾದ ಆರೋಪಿಯನ್ನ ದಶರಥ್ ಜಾಟ್ ಎಂದು ಗುರುತಿಸಲಾಗಿದೆ. ಬೆಟ್ಟ ಹತ್ತಲು ನಿರ್ಮಿಸಿದ್ದ ರೋಪ್ ವೇನಲ್ಲಿ ಏರಿದ ಕೈದಿ, ಬಳಿಕ ಜನ ಜಂಗುಳಿ ನಡುವೆ ಪರಾರಿಯಾಗಿದ್ದಾನೆ. ಈತನನ್ನು ಹಿಡಿಯಲು ನಾಲ್ವರು ಪೊಲೀಸರು ಹರಸಾಹಸಪಟ್ಟರು. ಆದರೆ, ಜನರ ನಡುವೆ ಕೈದಿ ಮರೆಯಾಗಿದ್ದಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA