ಬೆಂಗಳೂರು: 2023ಕ್ಕೆ ವಿದಾಯ ಹೇಳಿ 2024ನ್ನು ಸ್ವಾಗತಿಸಲು ಬಹಳಷ್ಟು ಜನರು ಕಾತುರರಾಗಿದ್ದು, ಹೊಸವರ್ಷ ಹತ್ತಿರ ಬರುತ್ತಿದ್ದು, ಆಚರಣೆಯ ಕೇಂದ್ರ ಬಿಂದುವಾಗಿರುವ ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕಮರ್ಷಿಯರ್ ಸ್ಟ್ರೀಟ್ ಗಳಲ್ಲಿ ಈಗಾಗಲೇ ಸಿದ್ಧತೆಗಳು ಜೋರಾಗಿ ನಡೆಯುತ್ತಿದೆ.
ಪ್ರತೀ ವರ್ಷದಂತೆಯೇ ಈ ವರ್ಷವೂ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕಮರ್ಷಿಯರ್ ಸ್ಟ್ರೀಟ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಗಳಿವೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಚರ್ಚ್ ಸ್ಟ್ರೀಟ್ ನಲ್ಲಿ ಸಂಭವಿಸಿದ ಸ್ಫೋಟ, ದೌರ್ಜನ್ಯದಂತಹ ಅಹಿತಕರ ಘಟನೆಗಳು ಸಂಭವಿಸದಂತೆ ಮಾಡಲು ಕ್ಯಾಮೆರಾ, ವೀಕ್ಷಣಾ ಗೋಪುರ (ವಾಚ್ ಟವರ್)ಗಳನ್ನು ಸ್ಥಾಪಿಸಿ ಭದ್ರತೆಗಳ ಹೆಚ್ಚಿರುವಂತೆ ವ್ಯಾಪಾರಿಗಳು ಹಾಗೂ ಅಂಗಡಿ ಸಂಘಗಳು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಬ್ರಿಗೇಡ್ ಶಾಪ್ಸ್ ಆ್ಯಂಡ್ ಎಸ್ಟಾಬ್ಲಿಷ್ ಮೆಂಟ್ ಅಸೋಸಿಯೇಷನ್ ಕಾರ್ಯದರ್ಶಿ ಸುಹೇಲ್ ಯೂಸುಫ್ ಮಾತನಾಡಿ, ಬಿಗಿ ಪೊಲೀಸ್ ನಿಯೋಜನೆಗಾಗಿ ಕೇಂದ್ರ ಡಿಸಿಪಿಗೆ ಪತ್ರದ ಮೂಲಕ ಮನವಿ ಮಾಡಿಕೊಳ್ಳಲಾಗಿದೆ. ನಮ್ಮ ಸಂಘದಿಂದ ಕ್ಯಾಮೆರಾ, ವಾಚ್ ಟವರ್ ಗಳನ್ನು ಅಳವಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಡಿಸೆಂಬರ್ 31 ರಂದು ಬ್ರಿಗೇಡ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಗಳು ಮಾಡದಂತೆ ಪೊಲೀಸರು ವ್ಯಾಪಾರಿಗಳಿಗೆ ಮನವಿ ಮಾಡಿಕೊಂಡಿದ್ದು, ಅಂದು ಸಂಜೆ 6 ಗಂಟೆಯಿಂದ ಸಂಚಾರ ನಿರ್ಬಂಧಗಳು ಜಾರಿಯಲ್ಲಿರಲಿವೆ. ಎಂಜಿ ರಸ್ತೆ ಜಂಕ್ಷನ್ ನಲ್ಲಿ ಪಾದಚಾರಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಪಾದಚಾರಿಗಳನ್ನು ರೆಸ್ಟ್ ಹೌಸ್ ರಸ್ತೆ ಅಥವಾ ಚರ್ಚ್ ಸ್ಟ್ರೀಟ್ನಿಂದ ಬ್ರಿಗೇಡ್ ರಸ್ತೆಗೆ ಹೋಗದಂತೆ ನೋಡಿಕೊಳ್ಳುವಂತ ಪೊಲೀಸರಿಗೆ ವಿನಂತಿಸಲಾಗಿದೆ.
ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಕಿಡಿಗೇಡಿಗಳು ನಂದರ ಜನನಿಬಿಡ ಪ್ರದೇಶಗಳಲ್ಲಿ ತಲೆ ಮರೆಸಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಯಾವುದೇ ಅಂಗಡಿಗಳ ಮೆಟ್ಟಿಲುಗಳ ಮೇಲೆ, ಶಾಪಿಂಗ್ ಕಾಂಪ್ಲೆಕ್ಸ್ ಗಳ ನೆಲಮಾಳಿಗೆ ಪ್ರವೇಶಿಸುವುದರ ಮೇಲೆ ಸಂಘ ನಿರ್ಬಂಧ ಹೇರಿದೆ ಎಂದು ತಿಳಿಸಿದ್ದಾರೆ.


