ಮೇಕೆದಾಟುಗೆ ಅನುಮತಿ ಕೊಡಿಸುವಂತೆ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದರು. ಮೇಕೆದಾಟು ಕುಡಿಯುವ ನೀರಿನ ಯೋಜನೆಯಾಗಿದ್ದು, ರಾಜ್ಯದ ಗಡಿಯ ಒಳಗೆ ನಿರ್ಮಾಣ ಆಗುವಂತಹುದ್ದು. ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕೆ ತಕರಾರು ಮಾಡುತ್ತಿದೆ. ಕುಡಿಯುವ ನೀರಿನ ಜೊತೆಗೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ವಿದ್ಯುತ್ ಉತ್ಪಾದನೆಗೆ ಬಳಕೆಯಾದ ನೀರು ಕೂಡ ತಮಿಳುನಾಡಿಗೇ ಹೋಗುತ್ತದೆ. ಇದರಿಂದ ಅವರಿಗೇ ಹೆಚ್ಚಿನ ಅನುಕೂಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಕೇಂದ್ರ ಸರ್ಕಾರ ಪರಿಸರ ಅನುಮತಿ ಕೊಟ್ಟ ಕೂಡಲೇ ಮಹದಾಯಿ ಕೆಲಸ ಶುರು ಮಾಡಲಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಹದಾಯಿ ವಿಚಾರದಲ್ಲಿ ಈಗಾಗಲೇ ಗೆಜೆಟ್ ನೋಟಿಫಿಕೇಷನ್ ಕೂಡ ಆಗಿದೆ. ಯೋಜನೆಯ ಜಾರಿಗೆ ಬೇರೆ ಯಾವ ಅಡೆತಡೆ ಇಲ್ಲ. ಪರಿಸರ ತೀರುವಳಿ ಮಾತ್ರ ಬಾಕಿ ಇದೆ. ಇದನ್ನು ಕೇಂದ್ರ ಸರ್ಕಾರವೇ ಕೊಡಬೇಕಿದ್ದು, ಇದುವರೆಗೂ ಕೊಟ್ಟಿಲ್ಲ. ಟೆಂಡರ್ ಕರೆದು ಎಸ್ಟಿಮೇಟ್ ಕೂಡ ಆಗಿದೆ. ಕೇಂದ್ರ ಸರ್ಕಾರ ಪರಿಸರ ಅನುಮತಿ ಕೊಟ್ಟ ಕೂಡಲೇ ಕೆಲಸ ಶುರು ಮಾಡಬಹುದು ಎಂದು ಸಿಎಂ ಹೇಳಿದರು.


