ಸರಗೂರು: ದೇಶದಲ್ಲಿ ಸಾಮಾಜಿಕ ವ್ಯವಸ್ಥೆ ಹದೆಗೆಟ್ಟಿದೆ. ವಿದೇಶಗಳಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಬೇಕಾದರೆ ಶಾಲೆಯಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾ, ಭದ್ರತಾ ಸಿಬ್ಬಂದಿ ಇರುವ ಕುರಿತು ವಿಚಾರಿಸಿ ಬಳಿಕ ಮಕ್ಕಳನ್ನು ಶಾಲೆ ದಾಖಲಿಸುತ್ತಾರೆ. ಇದು ವಿದೇಶಿಗರು ಮಕ್ಕಳ ರಕ್ಷಣೆ ಬಗ್ಗೆ ಹೊಂದಿರುವ ವಿಶೇಷ ಒಲವು ತೋರಿಸುತ್ತದೆ. ಆದರೆ ನಮ್ಮಲ್ಲಿ ಅಂತಹ ಕಾಳಜಿ ಇಲ್ಲ’ ಎಂದು ಸರಗೂರು ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಆರ್.ಕಿರಣ್ ಹೇಳಿದರು.
ಪಟ್ಟಣದ ಪೋಲಿಸ್ ಠಾಣೆಯ ಆವರಣದಲ್ಲಿ ಗುರುವಾರದಂದು ವಿವೇಕಾನಂದ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪೋಲೀಸ್ ಇಲಾಖೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಬಗ್ಗೆ ಶಿಕ್ಷಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶೌಚಾಲಯ, ತರಗತಿಗಳು ನಡೆಯದ ಕೊಠಡಿಗಳು, ಆಟದ ಮೈದಾನದಲ್ಲಿ ಮಕ್ಕಳ ಮೇಲೆ ಅತ್ಯಾಚಾರ ನಡೆಯುವ ಸಂಭವ ಹೆಚ್ಚು ಇರುತ್ತದೆ. ಹೀಗಾಗಿ ಶಿಕ್ಷಕರು ಅಂತಹ ಸ್ಥಳಗಳಿಗೆ ಆಗಾಗ ಭೇಟಿ ನೀಡಿ ಗಮನಿಸುತ್ತಿರಬೇಕು. ಒಂದೊಮ್ಮೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸಂಭವಿಸಿದರೆ ತಕ್ಷಣವೇ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.
ಶಾಲೆಗಳಲ್ಲಿ ಶಿಕ್ಷಕರು ಪ್ರತಿಕ್ಷಣ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಬೇಕು. ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ ಮತ್ತು ದೈಹಿಕ ಕಿರುಕುಳವನ್ನು ತಡೆಗಟ್ಟಬೇಕು. ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದರು.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಶಿಕ್ಷಕರು, ಪೋಷಕರು ಮತ್ತು ಪೊಲೀಸರು ಗೌಪ್ಯವಾಗಿಡಬೇಕು. ಮಾಧ್ಯಮಗಳಲ್ಲಿ ಆ ಕುರಿತು ವರದಿಗೆ ಅವಕಾಶ ನೀಡಬಾರದು. ಎಲ್ಲಿಯೂ ಸಹ ಮಗುವಿನ ಹೆಸರು ಬಹಿರಂಗವಾಗದಂತೆ ನೋಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ದೌರ್ಜನ್ಯಕ್ಕೆ ಒಳಗಾದ ಮಗು ಮತ್ತು ಪೋಷಕರ ಕುಟುಂಬಕ್ಕೆ ಆಗುವ ಆಘಾತವನ್ನು ಕಡಿಮೆ ಮಾಡಬಹುದು’ ಎಂದು ಹೇಳಿದರು.
ಸರ್ಕಲ್ ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಪ್ರತಿ ಶಾಲೆಯಲ್ಲಿ ಕೂಡ ಕಡ್ಡಾಯವಾಗಿ ಸಿ.ಸಿ.ಕ್ಯಾಮೆರಾ ಅಳವಡಿಸಬೇಕು. ಆದರೆ ಇವತ್ತು ಲಕ್ಷಗಟ್ಟಲೇ ಶುಲ್ಕ ತೆಗೆದುಕೊಳ್ಳುವ ಶಾಲೆಗಳು ಸಹ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇಡೀ ತಾಲ್ಲೂಕಿನಲ್ಲಿ ಒಂದೇ ಒಂದು ಶಾಲೆಯಲ್ಲೂ ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಿಲ್ಲ. ಇದು ಶಾಲೆಗಳ ಕಾರ್ಯಲೋಪ ಎತ್ತಿ ತೋರಿಸುತ್ತದೆ’ ಎಂದು ತಿಳಿಸಿದರು.
‘ಒಂದು ಸಿ.ಸಿ. ಟಿ.ವಿ ಕ್ಯಾಮೆರಾ ಒಬ್ಬ ಕಾನ್ ಸ್ಟೆಬಲ್ ಮಾಡುವ ಕೆಲಸ ಮಾಡುತ್ತದೆ. ಆದ್ದರಿಂದ ಪ್ರತಿ ಶಾಲೆಯಲ್ಲಿ ಶಿಕ್ಷಣ ಇಲಾಖೆ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಬೇಕು. ನಮ್ಮ ಇಲಾಖೆ ವತಿಯಿಂದ ಸಹ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಲೈಂಗಿಕ ಕಿರುಕುಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.
ಮಹಿಳೆ ಮತ್ತು ಮಕ್ಕಳ ಮೇಲೆ ಮನೆಯ ವಾತಾವರಣದಲ್ಲಿಯೇ ಹೆಚ್ಚಾಗಿ ಲೈಂಗಿಕ ದೌರ್ಜನ್ಯ ಪ್ರಕರಣ ನಡೆಯುತ್ತಿವೆ. ಸರ್ಕಾರ ಸಹ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರೂ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ’ ಎಂದರು.
ಈ ಸಂದರ್ಭದಲ್ಲಿ ಕ್ರೈಂ ಬ್ರಾಂಚ್ ಇನ್ ಸ್ಪೆಕ್ಟರ್ ಗೋಪಾಲ್, ಎಎಸ್ ಐ ನಾರಾಯಣ್, ಕೃಷ್ಣಕುಮಾರ್ , ಶೋಭಾ, ಪುರುಷೋತ್ತಮ್, ಇಮ್ರಾನ್, ದೇವರಾಜು, ಶಿವರಾಜು, ನಾಗೇಗೌಡ, ಸುನೀಲ್, ಕೃಷ್ಣಯ್ಯ, ಜಗದೀಶ್, ಸುನೀಲ್, ಮಹಾದೇವಮ್ಮ, ಇನ್ನೂ ಸಿಬ್ಬಂದಿಗಳು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


