ಮುಂಬೈ: ಪುಣೆಯ ಧವಲ್ಪುರಿ ಫಾಟಾ ಬಳಿ ರಾತ್ರಿ 2:30ಕ್ಕೆ ಅಹ್ಮದ್ನಗರ-ಕಲ್ಯಾಣ ಹೆದ್ದಾರಿಯಲ್ಲಿ ತಡರಾತ್ರಿ ಟ್ರಾಕ್ಟರ್, ಸರ್ಕಾರಿ ಬಸ್ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದಾರೆ.
ಅಪಘಾತದ ನಂತರ ಆರು ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಐವರನ್ನು ಪಾರ್ನರ್ ಗ್ರಾಮಾಂತರ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೆ, ಒಬ್ಬರನ್ನು ಅಹ್ಮದ್ನಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ವೇಳೆ ಆರು ಮಂದಿ ಸಾವನ್ನಪ್ಪಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡವು ಸ್ಥಳಕ್ಕೆ ಆಗಮಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ತಲುಪಿಸಲು ಸಹಾಯ ಮಾಡಿದ್ದಾರೆ. ಮೃತರ ಗುರುತು ಪತ್ತೆ ಮಾಡಲಾಗುತ್ತಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಅಪಘಾತದಲ್ಲಿ ಸಾವನ್ನಪ್ಪಿದ ಎಲ್ಲರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.


