ಬೆಂಗಳೂರು: ಬೆಂಗಳೂರಿನಲ್ಲಿ ತಡರಾತ್ರಿ ರೌಡಿ ಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ವಿವೇಕ್ ನಗರದ ಮಾಯಾ ಬಜಾರ್ ಸ್ಲಂನಲ್ಲಿ ನಡೆದ ಘಟನೆ ಇದಾಗಿದ್ದು, ಕೊಲೆಯಾದ ರೌಡಿ ಶೀಟರ್ ನನ್ನು ಸತೀಶ್ ಅಲಿಯಾಸ್ ಮಿಲ್ಟ್ರಿ ಸತೀಶ್ ಎಂದು ಗುರುತಿಸಲಾಗಿದೆ.
ಮಿಲಿಟ್ರಿ ಸತೀಶ್ ಮಾಯಾ ಬಜಾರ್ ಸ್ಲಂನಲ್ಲಿ ವಾಸಿಸುತ್ತಿದ್ದು, ರಾತ್ರಿ ಮನೆಯ ಹೊರಗಡೆ ಮಲಗಿದ್ದಾಗ, ಬೆಳಗ್ಗಿನ ಜಾವ ಮೂರು ಗಂಟೆಯ ಹೊತ್ತಿಗೆ ಆತನ ಮನೆಯ ವಠಾರಕ್ಕೆ ಬಂದ ದುಷ್ಕರ್ಮಿಗಳು ಆತನನ್ನು ಕೊಚ್ಚಿ ಪರಾರಿಯಾಗಿದ್ದಾರೆ.
ಹಳೇ ವೈಷಮ್ಯ ಅಥವಾ ವೈಯಕ್ತಿಕ ಕಾರಣಕ್ಕೆ ಕೊಲೆ ಅನುಮಾನ ವ್ಯಕ್ತಪಡಿಸಲಾಗಿದ್ದು, ಪರಾರಿಯಾಗಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಕೊಲೆಗಾರರು ಮಿಲಿಟ್ರಿ ಸತೀಶ್ ಗೆ ಪರಿಚಿತರೇ ಆಗಿರುವುದರಿಂದ ಪೊಲೀಸರಿಗೆ ಕೆಲವು ಸಂಶಯಗಳಿವೆ. ಜತೆಗೆ ಸ್ಥಳದ ಸಿಸಿ ಟಿವಿ ದೃಶ್ಯಾವಳಿಗಳ ಫೊಟೇಜ್ ಪಡೆದು ತಪಾಸಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ವಿವೇಕನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


