ಸರಗೂರು: ತಾಲೂಕಿನ ಹಂಚೀಪುರ ಹಾಗೂ ಹೆಗ್ಗನೂರು ಸಮೀಪ ಆಗಾಗ್ಗೆ ಕಾಣಿಸಿಕೊಂಡು, ಜಾನುವಾರುಗಳನ್ನು ಬಲಿಪಡೆಯುವ ಮೂಲಕ ಅಕ್ಕಪಕ್ಕದ ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದ್ದ ಹುಲಿಯನ್ನು ಮಂಗಳವಾರ ಬೆಳಗಿನ ಜಾವ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಮಂಗಳವಾರ ಬೆಳಗ್ಗಿನ ಜಾವ 3 ಗಂಟೆ ಸಮಯದಲ್ಲಿ ಹೆಗ್ಗನೂರು ಸಮೀಪದ ದೇವಲಾಪುರದ ಪುರದಶೆಡ್ಡು ಬಳಿಯ ಅಳಗಂಚಿ ವಲಯದ ಕಾಡಂಚಿನ ಭಾಗದ ಜಮೀನೊಂದರಲ್ಲಿ ಹುಲಿ ಇರುವ ಖಚಿತ ಮಾಹಿತಿ ಮೇರಿಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಸುಮಾರು 6–7 ವರ್ಷದ ಗಂಡು ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಹಂಚೀಪುರ ಹಾಗೂ ಹೆಗ್ಗನೂರು ವ್ಯಾಪ್ತಿಯ ಗ್ರಾಮಗಳಲ್ಲಿ ಜಾನುವಾರುಗಳನ್ನು ಈ ಹುಲಿ ಬಲಿ ಪಡೆಯುತ್ತಿತ್ತು ಎನ್ನಲಾಗಿದೆ. ಅಲ್ಲದೇ ವಾರದ ಹಿಂದಷ್ಟೇ ಈ ಹುಲಿ ಸಂಚಾರ ಮಾಡಿದ ಫೋಟೋಗಳು ಅರಣ್ಯ ಇಲಾಖೆಯ ಕ್ಯಾಮೆರಾಗೆ ಸೆರೆಯಾಗಿತ್ತು. ಹುಲಿ ಚಿತ್ರ ನೋಡಿ ಆತಂಕಗೊಂಡ ಗ್ರಾಮಸ್ಥರು ಹುಲಿಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು. ಹಂಚೀಪುರದಲ್ಲಿ ರಸ್ತೆ ತಡೆದು ಪ್ರತಿಭಟನೆಯನ್ನೂ ನಡೆಸಿದ್ದರು.

ಸ್ಥಳೀಯರ ಒತ್ತಾಯಕ್ಕೆ ಮಣಿದ ಅರಣ್ಯ ಇಲಾಖೆ ಮೊಳೆಯೂರು ವಲಯದ ಅಳಗಂಚಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿಯಿಂದಲೇ ಸಾಕಾನೆಗಳಾದ ಭೀಮಾ, ಮಹೇಂದ್ರ, ಧನಂಜಯ, ಇಂದ್ರನನ್ನು ಬಳಸಿಕೊಂಡು ಸುಮಾರು 60 ಮಂದಿ ಸಿಬ್ಬಂದಿ ಕೂಂಬಿಂಗ್ ಆರಂಭಿಸಿದರು. ಸೋಮವಾರ ಎಂದಿನಂತೆ ಡ್ರೋನ್ ಕ್ಯಾಮೆರಾ ಮೂಲಕ ಕಾರ್ಯಾಚರಣೆ ಮಾಡುವಾಗ ಮಂಗಳವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಹುಲಿಯ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ವೈದ್ಯರು ಡಾ.ವಾಸಿಂ ಮಿರ್ಜಾ ಮತ್ತು ಡಾ.ಆದರ್ಶ್ ಸಹಕಾರದಿಂದ ಶಾರ್ಪ್ ಶೂಟರ್ ಗಳಾದ ಅಕ್ರಂಪಾಷ ಮತ್ತು ರಂಜನ್ ಹುಲಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಹುಲಿಯನ್ನು ಬಂಡೀಪುರ ಮುಖ್ಯ ಕಚೇರಿಗೆ ರವಾನಿಸಲಾಗಿದ್ದು, ಮೇಲಾಧಿಕಾರಿಗಳ ಆದೇಶದಂತೆ ಮುಂದಿನ ಕ್ರಮವಹಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ಡಿಸಿಎಫ್ ಗಳಾದ ಪರಮೇಶ್, ಪ್ರಭಾಕರನ್, ಎಸಿಎಫ್ ಗಳಾದ ಸುಮಿತ್ರ ಎಸ್., ಡಿ.ಪರಮೇಶ್, ಆರ್ ಎಫ್ ಒಗಳಾದ ನಾರಾಯಣ್, ಅಕ್ಷಯ್ ಕುಮಾರ್, ಮುಖಂಡರು ಸುನೀಲ್ ಬೋಸ್ ಅಭಿಮಾನಿಗಳ ಬಳಗದ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಸಿದ್ದರಾಜು, ತ್ರಿಶಂಭು, ಸಾಮಾಜಿಕ ಜಾಲತಾಣ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಎಂ.ಸಿ ,ಶಿವಚಂದ್ರ,ರೈತ ಕಲ್ಯಾಣ ಯುವ ಘಟಕದ ಅಧ್ಯಕ್ಷ ಗಿರೀಶ್, ರಾಜೇಶ್, ಬಸವರಾಜ್ ,ಡ್ರೋನ್ ತಂಡ, ಆನೆ ಕಾರ್ಯಪಡೆ, ಚಿರತೆ ಕಾರ್ಯಪಡೆ ಸೇರಿದಂತೆ ಪೊಲೀಸ್ ಇಲಾಖೆ, ಮೈಸೂರು ಅರಣ್ಯ ವಿಭಾಗ ಮತ್ತು ಬಂಡೀಪುರ ಅರಣ್ಯ ವಿಭಾಗದ ಸಿಬ್ಬಂದಿ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


