ಒಮ್ಮೆ ಸತ್ಯಪುರ ರಾಜ್ಯಕ್ಕೆ ಸೇರಿದ ಸಿರಿವನ ಎಂಬ ಅರಣ್ಯದಲ್ಲಿ ಪ್ರಖ್ಯಾತ ಗುರು ಪ್ರಭುಶಿಖಿರ ಎಂಬುವರ ಗುರುಕುಲದಲ್ಲಿ ಸರ್ವವಿದ್ಯಾ ಪರಂಗತರಾಗಿದ್ದ ಜ್ಞಾನದೇವ, ಸತ್ಯದೇವ ಮತ್ತು ಅಮರದೇವಗಳೆಂಬ ಮೂವರು ಪಂಡಿತರು ರಾಜ ವೀರಬಲ್ಲಾಳನ ಆಸ್ಥಾನಕ್ಕೆ ಬಂದರು.
ಅವರ ಮುಖದ ವರ್ಚಸ್ಸನ್ನು ನೋಡಿ ಎದ್ದು ನಿಂತು ಗೌರವಿಸಿ ನಂತರ ರಾಜ ಪಂಡಿತರುಗಳೇ ನನ್ನಿಂದ ನಿಮಗೆ ಏನಾಗಬೇಕು ಎಂದಾಗ ಮೂವರೂ ತಮ್ಮ ತಮ್ಮ ಪರಿಚಯ ಮಾಡಿಕೊಂಡ ನಂತರ ಅಮರದೇವನು ರಾಜರೇ ನಮಗೆ ನಿಮ್ಮ ಆಸ್ಥಾನದಲ್ಲಿ ನಮಗೆ ರಾಜಗುರು ಸ್ಥಾನಬೇಕು ನೀಡುವಿರಾ ಎಂದಾಗ ಹರ್ಷಿತನಾದ ರಾಜನು ಆಗಬಹುದು, ಆದರೆ ರಾಜಗುರು ಸ್ಥಾನ ಕೇವಲ ಒಬ್ಬರಿಗೆ ಮಾತ್ರ ದೊರಕುವುದು ಎಂದಾಗ ಸತ್ಯದೇವನು ಮುಂದೆ ಬಂದು ಇವರಿಬ್ಬರಿಗಿಂತ ನನಗೆ ಹೆಚ್ಚು ಜ್ಞಾನ ನನಗೆ ನೀಡಬೇಕು ಎಂದಾಗ ಅವರಿಬ್ಬರಲ್ಲಿ ಮಾತಿನ ವೈಮನಸ್ಯ ಉಂಟಾಯಿತು.
ನಂತರ ಸುಮ್ಮನೆ ನಿಂತಿದ್ದ ಜ್ಞಾನದೇವನನ್ನು ಕುರಿತು ರಾಜ ನೀವು ಏನು ಹೇಳುವಿರಿ ಎಂದಾಗ ಜ್ಞಾನದೇವನು ಮಹಾರಾಜರೇ ತಮ್ಮ ತೀರ್ಮಾನವೇ ಅಂತಿಮ ನಾನು ಹೇಳುವುದು ಏನೂ ಇಲ್ಲ ಎಂದಾಗ ರಾಜನು ಯೋಚಿಸಿ ಆಯಿತು. ಈಗ ನಿಮ್ಮ ಮೂವರಿಗೂ ಒಂದು ಪರೀಕ್ಷೆ ನೀಡುವೆ ಅದರಲ್ಲಿ ವಿಜಯಿಶಾಲಿಯಾದ ಒಬ್ಬರಿಗೆ ರಾಜಗುರು ಪದವಿ ನೀಡುವೆ ಒಪ್ಪಿಗೆಯೇ ಎಂದಾಗ ಪಂಡಿತರುಗಳು ಒಪ್ಪಿದರು.
ನಂತರ ರಾಜ ಮೂವರಿಗೂ ಒಂದೊಂದು ಅತ್ಯಂತ ಬೆಲೆಬಾಳುವ ವಜ್ರಗಳನ್ನು ನೀಡಿ ನಂತರ ಮೂವರನ್ನು ಕುರಿತು ನೋಡಿ ಇನ್ನು ಒಂದು ವರುಷದ ಅವಧಿಯಲ್ಲಿ ಈ ವಜ್ರವನ್ನು ಹೇಗೆ ಬಳಸುತ್ತೀರೊ ಗೊತ್ತಿಲ್ಲ ಆದರೆ ಈ ಒಂದು ವಜ್ರದಿಂದ ಅತಿಹೆಚ್ಚು ಸಂಪಾದನೆ ಮಾಡಿ ತೋರಿಸಿಸುತ್ತಾರೋ ಅವರಿಗೆ ರಾಜಗುರು ಪದವಿ ನೀಡಲಾಗುವುದು ಎಂದಾಗ ಸರಿ ಎಂದು ಹೇಳಿ ಮೂವರೂ ಮೂರುದಿಕ್ಕುಗಳನ್ನು ಹಿಡಿದು ಹೊರಟುಹೋದರು.
ಒಂದು ವರುಷವಾಯಿತು ನಂತರ ಮೂವರೂ ಸತ್ಯಪುರ ರಾಜ ಮಹಲಿಗೆ ಬಂದರು ರಾಜನು ಅವರಿಗೆ ಸ್ವಾಗತಕೋರಿ ಈಗ ಹೇಳಿ ಯಾರು ಏನೇನು ಮಾಡಿ ಸಂಪಾದಿಸಿದಿರಿ ಎಂದಾಗ ಮೊದಲು ಅಮರದೇವನು ಮುಂದೆ ಬಂದು ರಾಜರೇ ನಾನು ಪಕ್ಕದ ರಾಜ್ಯದ ನಗರವೊಂದಕ್ಕೆ ಹೋಗಿ ತಾವು ನೀಡಿದ ವಜ್ರವನ್ನು ಅಧಿಕ ಬೆಲೆಗೆ ಮಾರಿ ಬಂದ ಹಣದಿಂದ ಲೇವಾದೇವಿ ವ್ಯವಹಾರ ಮಾಡಲು ಶುರು ಮಾಡಿದೆ. ಅದು ದಿನದಿಂದ ದಿನಕ್ಕೆ ಅತ್ಯಧಿಕ ಲಾಭ ತಂದು ಕೊಟ್ಟಿತು. ಆದ್ದರಿಂದ ಇಂದು ನನ್ನಬಳಿ ಒಂದು ಸಾವಿರಕ್ಕೂ ಅಧಿಕ ಅಂತಹ ವಜ್ರಗಳಿವೆ ಎಂದಾಗ ರಾಜನಾದಿಯಾಗಿ ಎಲ್ಲರೂ ಚಪ್ಪಾಳೆ ತಟ್ಟಿ ಶಹಬಾಷ್ ಎಂದರು.
ನಂತರ ಸತ್ಯದೇವನು ಮುಂದೆ ಬಂದು ರಾಜರೇ ನಾನು ತಾವು ನೀಡದ ವಜ್ರವನ್ನು ಒಬ್ಬ ಜಮೀನು ದಾರನಿಗೆ ಕೊಟ್ಟು ಒಂದಿಷ್ಟು ಭೂಮಿಕೊಂಡು ಕೊಂಡೆ, ನಂತರ ಅದೇ ಭೂಮಿಯನ್ನು ಅಧಿಕ ಬಲೆಗೆ ಬೇರೆಯವರಿಗೆ ಮಾರಿದೆ, ಬಂದ ಅಧಿಕಹಣದಿಂದ ಬೇರೆಡೆ ಮತ್ತಷ್ಟು ಭೂಮಿ ಕೊಂಡುಕೊಂಡೆ, ಮತ್ತೆ ಅಧಿಕ ಬಲೆಗೆ ಮಾರಿದೆ ಹೀಗೆಯೇ ಮಾಡುತ್ತಾ ಮಾಡುತ್ತಾ ಇಂದು ನನ್ನ ಬಳಿ ಎರಡು ಸಾವಿರಕ್ಕೂ ಅಧಿಕ ಮಂಡಲ ಭೂಮಿ ಇದೆ ಎಂದಾಗ ಮತ್ತೆ ರಾಜನಾದಿಯಾಗಿ ಎಲ್ಲರೂ ಚಪ್ಪಾಳೆ ತಟ್ಟಿದರು.
ನಂತರ ರಾಜನು ಜ್ಞಾನದೇವರೇ ತಾವು ಏನು ಮಾಡಿದಿರಿ ಎಂದಾಗ ಜ್ಞಾನದೇವನು ಕೈ ಮುಗಿದು ಮುಂದೆ ಬಂದು ವಿನಯದಿಂದ ಮಹಾರಾಜರೇ ನೀವು ಕೊಟ್ಟ ವಜ್ರವು ನನಗೆ ತಮ್ಮಿಂದ ದಾನಸ್ವರೂಪವಾಗಿ ಬಂದಿದ್ದರಿಂದ ಅದನ್ನು ನಾನು ಬಳಸಲು ಮನಸ್ಸು ಬಾರದೆ ಅದನ್ನು ಅರಮನೆಯ ಹೊರಗೆ ನಿಂತಿದ್ದ ಒಬ್ಬ ನಿರ್ಗತಿಕನಿಗೆ ಅಂದೇ ದಾನ ನೀಡಿದೆ ಎಂದಾಗ ಅಲ್ಲಿದ್ದ ಎಲ್ಲರೂ ಇನ್ನು ಇವರಿಗೆ ರಾಜಗುರು ಸ್ಥಾನ ಸಿಕ್ಕಂತೆ ಎಂದುಕೊಳ್ಳುವಾಗು ರಾಜನು ಹಾಗಾದರೆ ತಾವು ಏನು ಸಂಪಾದಿಸಿದಿರಿ ಎಂದು ಕೇಳಿದಾಗ ಜ್ಞಾನದೇವನು ನಾನು ಸೀದಾ ಅರಣ್ಯಕ್ಕೆ ಹೋಗಿ ಅಲ್ಲಿ ನನ್ನ ಸ್ವಪ್ರಯತ್ನದಿಂದ ಒಂದು ಸಣ್ಣ ಕುಟೀರ ಕಟ್ಟಿದೆ, ನಂತರ ಅಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾ ದಾನ ನೀಡುತ್ತಿರುವೆನು, ಇದರಿಂದ ಇಂದು ನೂರಾರು ಬಡವರು, ನಿರ್ಗತಿಕರು ವಿದ್ಯೆಕಲಿಯುತ್ತಿದ್ದಾರೆ. ಇದರಿಂದ ಮುಂದೊಂದು ದಿನ ತಮ್ಮ ರಾಜ್ಯ ಅಧಿಕ ವಿದ್ಯಾವಂತರಿಂದ ಕೂಡುವುದು ಮತ್ತು ಅವರೆಲ್ಲಾ ಸ್ವಾವಲಂಬಿಗಳಾಗಿ ಬದುಕುವರು ರಾಜರೇ ಇದೇ ನಾನು ಸಂಪಾದಿಸಿದ್ದು ಎಂದಾಗ ರಾಜನಾದಿಯಾಗಿ ಕುಳಿತಿದ್ದ ಎಲ್ಲರೂ ಎಂದು ನಿಂತು ಜೋರಾದ ಚಪ್ಪಾಳೆಯೊಂದಿಗೆ ಜೈಕಾರ ಹಾಕಿದರು.
ನಂತರ ರಾಜನು ಅಮರದೇವ ಮತ್ತು ಸತ್ಯದೇವರನ್ನು ಕುರಿತು ನೋಡಿ ನಾನು ವಜ್ರ ನೀಡಿದ್ದು ನೀವು ಅದನ್ನು ಹೇಗೆ ಸದ್ಬಳಕೆ ಮಾಡುತ್ತೀರಿ ಎಂದು ಪರೀಕ್ಷಿಸಲು ಆದರೆ ನೀವು ನಿಮ್ಮ ಸ್ವಾರ್ಥಕ್ಕಾಗಿ ಸಂಪಾದಿಸಿದಿರಿ ಅದರಿಂದ ನೀವು ಸಿರಿವಂತರಾದಿರಿ, ಆದರೆ ಜ್ಞಾನದೇವರನು ಸಮಾಜಕ್ಕಾಗಿ, ದೇಶದ ಹಿತಕ್ಕಾಗಿ ಸೇವೆ ಸಲ್ಲಿಸಿದ್ದಾರೆ ಆದ್ದರಿಂದ ಅವರಿಗೇ ರಾಜಗುರು ಸ್ಥಾನ ಸಲ್ಲುವುದು ಎಂದಾಗ ರಾಜನಿಗೆ ಜೈಕಾರ ಹಾಕಿದರು.
ನೀತಿ: ಸಾಂದರ್ಭಿಕ ಪರೀಕ್ಷೆಗಳ ಮೂಲ ಉದ್ದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಬಹು ಮುಖ್ಯ.
ವಿಶೇಷ ಲೇಖನ
ಉದಯೋನ್ಮುಖ ಬರಹಗಾರರು
ರಚನೆ : ಶ್ರೀ ವೇಣುಗೋಪಾಲ್ ತುಮಕೂರು
ಅನಿಸಿಕೆ ಅಭಿಪ್ರಾಯ ತಿಳಿಸಲು ದೂರವಾಣಿ ಸಂಖ್ಯೆ: 9449138522