ನವದೆಹಲಿ: ಈ ದೇಶದ ಸಂಪತ್ತು ಅಲ್ಪ ಸಂಖ್ಯಾತರಿಗೆ ಮಾತ್ರ ಸೇರಿದ್ದಲ್ಲ. ದಲಿತರು, ಬಡವರು, ಆದಿವಾಸಿಗಳಿಗೂ ದೇಶದ ಸಂಪತ್ತಿನ ಮೇಲೆ ಹಕ್ಕಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ತಿರುಗೇಟು ನೀಡಿದರು.
ಈ ಹಿಂದೆ ಹುಬ್ಬಳ್ಳಿಯ ಮುಸ್ಲಿಂ ಧರ್ಮಗುರುಗಳ ಸಮಾವೇಶವೊಂದರಲ್ಲಿ ಸಿಎಂ ಸಿದ್ದರಾಮಯ್ಯ, ಈ ದೇಶದ ಸಂಪತ್ತು ನಿಮಗೂ ಸೇರಿದ್ದು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ರಾಷ್ಟ್ರೀಯ ಮಹಾ ಅಧಿವೇಶನದಲ್ಲಿ ಅಮಿತ್ ಶಾ ಪ್ರತಿಕ್ರಿಯೆ ನೀಡಿದರು.
ದೇಶದ ಸಂಪತ್ತಿನ ಮೇಲೆ ದಲಿತರ, ಬಡವರ, ಆದಿವಾಸಿಗಳಿಗೆ ಹಕ್ಕಿದೆ. ಕೇವಲ ಅಲ್ಪ ಸಂಖ್ಯಾತರಿಗೆ ಇಲ್ಲ. ರಾಮಮಂದಿರದ ಪ್ರಾಣ ಪ್ರತಿಷ್ಟಾಪನೆಗೆ ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡಲಾಗಿತ್ತು. ತುಷ್ಟಿಕರಣ ರಾಜಕಾರಣಕ್ಕಾಗಿ ಪ್ರಾಣ ಪ್ರತಿಷ್ಠಾಪನೆಗೆ ಅವರು ಬರಲಿಲ್ಲ. ಆಹ್ವಾನವನ್ನು ತಿರಸ್ಕರಿಸಿ ದೇಶ ಮಹಾನ್ ಆಗುವ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ. ಇದನ್ನು ದೇಶದ ಜನ ನೋಡುತ್ತಿದ್ದಾರೆ. ಆದ್ರೆ ಬಿಜೆಪಿ ತುಷ್ಟಿಕರಣ ನಂಬಲ್ಲ. ರಾಮಮಂದಿರ ನಿರ್ಮಾಣದ ಸಂಪೂರ್ಣ ಯಶಸ್ಸು ಮೋದಿಯವರಿಗೆ ಸಲ್ಲುತ್ತೆ ಎಂದು ಹಾಡಿಹೊಗಳಿದರು.
ಪ್ರಧಾನಿ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುತ್ತಾರೆ ಎಂದು ದೇಶ ನಿರ್ಧರಿಸಿದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಐಎನ್‌ಡಿಐಎ ಮೈತ್ರಿಕೂಟ ಮತ್ತು ಕಾಂಗ್ರೆಸ್ ಪಕ್ಷ ದೇಶದಲ್ಲಿ ಪ್ರಜಾಪ್ರಭುತ್ವದ ಆತ್ಮವನ್ನು ನಾಶಪಡಿಸುತ್ತಿವೆ. ಅವರು ದೇಶದ ಪ್ರಜಾಪ್ರಭುತ್ವಕ್ಕೆ ಭ್ರಷ್ಟಾಚಾರ, ಸ್ವಜನಪಕ್ಷಪಾತ, ತುಷ್ಟೀಕರಣ ಮತ್ತು ಜಾತಿವಾದದ ಬಣ್ಣ ಬಳಿದಿದ್ದಾರೆ. ಇಂತಹ ಸ್ವಜನಪಕ್ಷಪಾತಿ ಪಕ್ಷಗಳು ಪ್ರಜಾಪ್ರಭುತ್ವವನ್ನು ಹಾಳು ಮಾಡುವಲ್ಲಿ ತೊಡಗಿವೆ. ಆದ್ರೆ ಭ್ರಷ್ಟಾಚಾರ, ಸ್ವಜನಪಕ್ಷಪಾತ, ತುಷ್ಟೀಕರಣ ಮತ್ತು ಜಾತೀಯತೆಯನ್ನು ತೊಡೆದುಹಾಕುವ ಮೂಲಕ ಪ್ರಧಾನಿ ಮೋದಿ 10 ವರ್ಷಗಳಲ್ಲಿ ಅಭಿವೃದ್ಧಿ ಸಾಧಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.


