ವರದಿ : ಮಂಜುಸ್ವಾಮಿ ಎಂ ಎನ್
ಕೊರಟಗೆರೆ : ಪೂರ್ವಜರು ಕಾಪಾಡಿಕೊಂಡು ಬಂದಂತಹ ಸಂಪ್ರದಾಯ, ಆಚಾರ ವಿಚಾರಗಳನ್ನು ಇಂದಿನ ಯುವ ಪೀಳಿಗೆ ಮುಂದುವರೆಸಬೇಕಿದೆ. ಇಲ್ಲವಾದರೆ ಮನುಕುಲ ಅಂತ್ಯ ಕಟ್ಟಿಟ್ಟಬುತ್ತಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ತಾಲ್ಲೂಕಿನ ಕೋಳಾಲ ಹೋಬಳಿ ಎಲೆರಾಂಪುರ ಗ್ರಾ.ಪಂ. ವ್ಯಾಪ್ತಿಯ ಕರಿದುಗ್ಗನಹಳ್ಳಿ ಮತ್ತು ಹನುಮಂತಯ್ಯನ ಪಾಳ್ಯದ ಗ್ರಾಮ ದೇವತೆ ಶ್ರೀ ದೊಡ್ಡಮ್ಮದೇವಿ ಸ್ಥಿರಬಿಂಬ ಪ್ರತಿಷ್ಠಾಪನಾ ಕುಂಭಾಭಿಷೇಕ ಮಹೋತ್ಸವ ಹಾಗೂ ಶ್ರೀ ಚಂಡಿಕಾ ಹೋಮ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವಿಕ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.
ಮನುಷ್ಯನಲ್ಲಿ ಹಣ ಮತ್ತು ಎಲ್ಲಾ ರೀತಿಯ ಸೌಲಭ್ಯ ಇದ್ದ ಮಾತ್ರಕ್ಕೆ ದೇವಾಲಯ ನಿರ್ಮಿಸಲು ಸಾಧ್ಯವಿಲ್ಲ, ಅದಕ್ಕೆ ದೇವಿಯ ಅನುಗ್ರಹ ಕೂಡ ಬೇಕಿದೆ. ನನ್ನ ತಾಯಿ ಕಲಿಸಿದ ಸಂಸ್ಕೃತಿ, ಸಂಪ್ರದಾಯದಿಂದ ಇಂದು ಉನ್ನತ ಸ್ಥಾನದಲ್ಲಿದ್ದೇನೆ. ಉದ್ಯಮಿ ನಿಲೇಶ್ ಮತ್ತು ಶಶಿಧರ್ ದುಬೈನಲ್ಲಿದ್ದರೂ ಉದ್ಯಮದ ಜೊತೆಗೆ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡುತ್ತಾ ಸಂಸ್ಕೃತಿ, ಆಚರಣೆಯನ್ನು ಮರೆಯದಿರುವುದು ಖುಷಿಯ ವಿಚಾರ ಎಂದು ಶ್ಲಾಘೀಸಿದರು.
ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಮಾತನಾಡಿ, ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳು ಸಹಜ, ರಾಜಕೀಯ ಹೊರತುಪಡಿಸಿದರೆ, ನಾನು ಮತ್ತೆ ಗೃಹ ಸಚಿವರು ಸಹೋದರರಿದ್ದಂತೆ, ಮಕ್ಕಳಿಗೆ ಬಾಲ್ಯದಲ್ಲಿಯೇ ತಾಯಿಯ ಸಿಗುವಂತಹ ಸಂಸ್ಕಾರ ಅವಶ್ಯಕವಾಗಿರುತ್ತದೆ ಎಂದು ಹೇಳಿದರು.
ಕಾರದೇಶ್ವರ ಮಠದ ವೀರ ಬಸವಲಿಂಗ ಸ್ವಾಮೀಜಿ, ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರ ಡಾ.ಹನುಮಂತನಾಥ ಸ್ವಾಮೀಜಿ, ನರಸೀಪುರ ವಿರಕ್ತಮಠದ ಶ್ರೀ ಗೌರಿಶಂಕರ ಸ್ವಾಮೀಜಿ, ಅಟವಿ ಮಠದ ಚೆನ್ನಬಸವೇಶ್ವರ ಸ್ವಾಮೀಜಿ, ಬಸವ ರಮಾನಂದ ಸ್ವಾಮೀಜಿ, ಕುಣಿಗಲ್ ಹರಿಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ 3 ದಿನದ ಧಾರ್ಮಿಕ ಪೂಜಾ ಕಾರ್ಯಕ್ರಮ ಯಶಸ್ವಿ ಕಂಡಿತು.
ಈ ಕಾರ್ಯಕ್ರಮದಲ್ಲಿ ತುಮಕೂರಿನ ವಿದ್ಯೋದಯ ಕಾಲೇಜಿನ ಕಾರ್ಯದರ್ಶಿ ಪ್ರದೀಪ್, ಉದ್ಯಮಿ ಶಶಿಧರ್, ಶಿಕ್ಷಕ ಹರೀಶ್, ವಿಜಯ್, ಗ್ರಾಮದ ಹಿರಿಯ ಮುಖಂಡ ಹನುಮಂತರಾಯಪ್ಪ ಸೇರಿದಂತೆ ಗ್ರಾಮದ ಗೌಡರು, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಹಲವು ಸ್ಥಳೀಯ ಮುಖಂಡರು ಹಾಜರಿದ್ದರು.
ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ದೇವಾಲಯಗಳಿಗೆ ವಿಶೇಷ ಸ್ಥಾನವಿದೆ. ಆದ್ದರಿಂದ ನಮ್ಮಲ್ಲಿ ಇಡೀ ವಿಶ್ವದಲ್ಲಿಯೇ ಹೆಚ್ಚು ದೇವಾಲಯ ಇದೆ. ನಿತ್ಯವೂ ನಾವು ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಲು ದೇವಾಲಯಗಳಿಗೆ ಬರಬೇಕಿದೆ. ನಾವು ದೇವರನ್ನು ಪೂಜಿಸುವಂತೆ ನಮ್ ಹೆತ್ತ ತಾಯಿಯನ್ನು ಆರಾಧಿಸಬೇಕು.
— ಡಾ.ಸಿದ್ದಲಿಂಗ ಮಹಾಸ್ವಾಮೀಜಿ, ಪೀಠಾಧ್ಯಕ್ಷ ಸಿದ್ದಗಂಗಾ ಮಠ. ತುಮಕೂರು.
ಲೌಕಿಕ ಮತ್ತು ಆಧ್ಯಾತ್ಮಿಕ ಎರಡನ್ನು ನಮ್ಮ ಬದುಕಿನಲ್ಲಿ ನಾವು ಅನುಸರಿಸಬೇಕಿದೆ. ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳಬೇಕು ಚಂಚಲವಾಗಲು ಬಿಡಬಾರದು, ಭಗವಂತನ ಸೇವೆಯನ್ನು ಎಲ್ಲರೂ ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಬೇಕಿದೆ.
— ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸುತ್ತೂರು ಮಠ, ಮೈಸೂರು.
ಕರಿದುಗ್ಗನಹಳ್ಳಿ ಮತ್ತು ಹನುಮಂತಯ್ಯನ ಪಾಳ್ಯ ಗ್ರಾಮದೇವತೆ ಶ್ರೀದೊಡ್ಡಮ್ಮ ದೇವಿ ದೇವಾಲಯ ನಮ್ಮೂರಿನ ಕನಸು ಗ್ರಾಮದಲ್ಲಿ ಸಣ್ಣದಾಗಿದ್ದ ದೇವಾಲಯ ಇಂದು ಭವ್ಯ ದೇವಾಲಯವಾಗಿದೆ. 48 ದಿನಗಳ ಕಾಲ ಮಂಡಲ ಪೂಜೆ ನಡೆಯಲಿದ್ದು ಗ್ರಾಮಸ್ಥರು ತಪ್ಪದೇ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು.
— ನಿಲೇಶ್, ಉದ್ಯಮಿ ಪರ್ವ ಗ್ರೂಪ್, ದುಬೈ.
ದಸರಾ ಶ್ರೇಷ್ಠ ಹಬ್ಬ:
ದೇಶದಲ್ಲಿ ನವರಾತ್ರಿಯನ್ನು ವಿಶೇಷವಾಗಿ ಆಚರಿಸಲಿದೆ. ಮೈಸೂರಿನ ದಸರಾ ಹಿಂದೂಗಳ ಪಾಲಿಗೆ ಬಹುದೊಡ್ಡ ಹಬ್ಬ. 9 ದಿವಸ ಚಾಮುಂಡೇಶ್ವರಿಯ 9 ಅವತಾರಗಳನ್ನು ಪೂಜಿಸಿ ಕೊನೆ ದಿನ ಬನ್ನಿ ಮರ ಕಡಿಯುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿತ್ತು. ದೊಡ್ಡಮ್ಮ ತಾಯಿ ದೇವಸ್ಥಾನ ಶ್ರೇಷ್ಠ ದಿವಸದಲ್ಲಿ ಉದ್ಘಾಟನೆಯಾಗಿದೆ.
— ಡಾ.ಜಿ ಪರಮೇಶ್ವರ, ಗೃಹ ಸಚಿವ. ಕರ್ನಾಟಕ ಸರ್ಕಾರ.
ಧಾರ್ಮಿಕ ಕಾರ್ಯಕ್ರಮ ಯಶಸ್ವಿ:
ಹನುಮಂತಯ್ಯನಪಾಳ್ಯದಲ್ಲಿ 1 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ಇತಿಹಾಸ ಪ್ರಸಿದ್ದ ಶ್ರೀದೊಡ್ಡಮ್ಮದೇವಿ ಸ್ಥಿರಬಿಂಬ ಪ್ರತಿಷ್ಟಾಪನಾ ಕುಂಬಾಭಿಷೇಕ ಮಹೋತ್ಸವ ಹಾಗೂ ಚಂಡಿಕಾ ಹೋಮ ಧಾರ್ಮಿಕ ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯರು ಕಳಸ ಹೊತ್ತು 15 ಕ್ಕೂ ಹೆಚ್ಚಿನ ಶ್ರೀಮಠದ ಶ್ರೀಗಳನ್ನು ಮತ್ತು ಗೃಹ ಸಚಿವ ಡಾ.ಜಿ ಪರಮೇಶ್ವರ ರವರನ್ನು ಸ್ವಾಗತಿಸಿದ್ದು ಮೂರು ದಿನದ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿ ಕಂಡಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC