ಬೆಂಗಳೂರು: ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ ಇಲ್ಲದೆ ಸರಬರಾಜು ನಿಯಮಿತವಾಗಿ ನಡೆಯುತ್ತಿದೆ. ಕೆಲವೆಡೆ ಜನರು ಪ್ಯಾನಿಕ್ ನಿಂದ ಅಗತ್ಯಕ್ಕಿಂತ ಹೆಚ್ಚು ಬುಕ್ಕಿಂಗ್ ಮಾಡುತ್ತಿರುವುದರಿಂದ ಗೊಂದಲ ಉಂಟಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿ ಒಂದು ದಿನಕ್ಕೆ 850 ಮೆಟ್ರಿಕ್ ಟನ್ ಗ್ಯಾಸ್ ಪೂರೈಕೆ ಆಗುತ್ತಿದ್ದು, ಬಳಕೆಯ ಪ್ರಮಾಣ ಅಧಿಕವಾಗಿದೆ. ಈ ಸಂದರ್ಭದಲ್ಲಿ ಮಿತವ್ಯಯವಾಗಿ ಬಳಸಲು ಗ್ರಾಹಕರಲ್ಲಿ ಮನವಿ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಎಲ್ ಪಿಜಿ ವಿತರಣೆ ಪ್ರತಿ ರಾಜ್ಯದ ಬಳಕೆ (consumption) ಆಧಾರದ ಮೇಲೆ ಕೇಂದ್ರದಿಂದ ನಿರ್ಧರಿಸಲಾಗುತ್ತದೆ. ಸಿಲಿಂಡರ್ ಸರಬರಾಜು ಆಗುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ಮತ್ತು ಸಂಬಂಧಿಸಿದ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯವಿದ್ದಲ್ಲಿ ರಾಜ್ಯದ ಅಗತ್ಯವನ್ನು ತಿಳಿಸಿ ಪತ್ರಗಳ ಮೂಲಕ ಗಮನಕ್ಕೆ ತರುತ್ತಿದ್ದಾರೆ. ಅತ್ಯಾವಶ್ಯಕ ಸೇವೆಗಳಾದ ಆಸ್ಪತ್ರೆಗಳು ಸೇರಿದಂತೆ ಹೋಟೆಲ್ ಹಾಗೂ ವ್ಯಾಪಾರಿಕ ಬಳಕೆದಾರರಿಗೆ ಯಾವುದೇ ರೀತಿಯ ಸರಬರಾಜು ಸಮಸ್ಯೆ ಇಲ್ಲ. ಅವರಿಗೆ ಅಗತ್ಯವಿರುವಷ್ಟು ಸಿಲಿಂಡರ್ ಒದಗಿಸಲಾಗುತ್ತಿದೆ ಎಂದು ಮುನಿಯಪ್ಪ ತಿಳಿಸಿದರು.
ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ 25–30 ದಿನಗಳಿಗೆ ಒಂದು ಸಿಲಿಂಡರ್ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸುಮಾರು 45 ದಿನಗಳಿಗೆ ಒಂದು ಸಿಲಿಂಡರ್ ಬಳಕೆಯಾಗುತ್ತದೆ. ಇದಕ್ಕೆ ಅನುಗುಣವಾಗಿ ಸರಬರಾಜು ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ಜನರು ಪ್ಯಾನಿಕ್ ಆಗಬಾರದು, ಅಗತ್ಯಕ್ಕಿಂತ ಹೆಚ್ಚು ಸಿಲಿಂಡರ್ ಬುಕ್ ಮಾಡಬಾರದು ಹಾಗೂ ಸ್ಟಾಕ್ ಇಟ್ಟುಕೊಳ್ಳಬಾರದು. ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬಂದರೆ ತಕ್ಷಣ ಸಂಬಂಧಿತ ಕಂಪನಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ. ಜನರಿಗೆ ಯಾವುದೇ ತೊಂದರೆ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಅಂತಾ ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


