ಬೆಂಗಳೂರು: ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಮಾಡಲಾಗುವ ಅನುದಾನ ಹಂಚಿಕೆಯಲ್ಲಿ ಬಿಜೆಪಿ ಶಾಸಕರ ವಿರುದ್ಧ ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದರು.
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್‌ಪೇಟೆ ವಾರ್ಡ್ ನಲ್ಲಿ 58.44 ಕೋಟಿ ರೂ.ಗಳ ವೈಟ್ ಟಾಪಿಂಗ್ ಮತ್ತು ರಸ್ತೆ ಅಭಿವೃದ್ಧಿ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿದ ನಂತರ ಮುಖ್ಯಮಂತ್ರಿಗಳು ಮಾತನಾಡಿದರು.
ದಿನೇಶ್ ಗುಂಡೂರಾವ್ ಅವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಶ್ರಮಿಸುವ ಜನಮುಖಿ ಶಾಸಕರು. ಇವರಿಗೆ ಉತ್ತಮ ಅವಕಾಶಗಳಿವೆ. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಬಹುಮತದಿಂದ ಗೆಲ್ಲಿಸಲೇಬೇಕು. ಕೆಂಪೇಗೌಡರ ಕಾಲದಲ್ಲಿ ಪೇಟೆ ಬೀದಿಯಾಗಿದ್ದ ಇಲ್ಲಿನ ಪೇಟೆಗಳು ಈಗಲೂ ಆ ಕಾಲದ ಸ್ವಭಾವವನ್ನೇ ಹೊಂದಿವೆ. ನಾವೊಮ್ಮೆ ಇಲ್ಲಿನ ರಸ್ತೆಗಳ ಅಗಲೀಕರಣದ ಬಗ್ಗೆ ಚಿಂತಿಸಿದ್ದೆವು. ಆದರೆ ದಿನೇಶ್ ಗುಂಡೂರಾವ್ ಅವರು ಒಪ್ಪಲಿಲ್ಲ. ನಮ್ಮ ಜನಗಳಿಗೆ ಸಮಸ್ಯೆ ಆಗುತ್ತದೆ ಸರ್ ಎಂದು ಸ್ಪಷ್ಟವಾಗಿ ನಿರಾಕರಿಸಿ, ರಸ್ತೆ ಅಗಲೀಕರಣ ಮಾಡದೆ, ರಸ್ತೆಗಳ ಆಧುನೀಕರಣ ಮತ್ತು ಚಿಕ್ಕಪೇಟೆಯ ಅಭಿವೃದ್ಧಿಗೆ ಯೋಜನೆ ರೂಪಿಸಿ ಜಾರಿ ಮಾಡಿದ್ದಾರೆ ಎಂದರು.
ಬೆಂಗಳೂರು ವಿಪರೀತವಾಗಿ ಬೆಳೆಯುತ್ತಿರುವ ನಗರ. ನಗರದ ಜನಸಂಖ್ಯೆ ಹೆಚ್ಚುತ್ತಿದ್ದು, ಈ ಸವಾಲನ್ನು ಗೆಲ್ಲಲು ಬೆಂಗಳೂರಿನ ರಸ್ತೆಗಳ ಆಧುನೀಕರಣ ಮತ್ತು ಅಭಿವೃದ್ಧಿಗೆ ಹೇರಳವಾದ ಹಣ ಒದಗಿಸುತ್ತಿದ್ದೇವೆ. ರಾಜ್ಯದ ಅಭಿವೃದ್ಧಿ ಯೋಜನೆಗಳ ಅನುದಾನ ಹಂಚಿಕೆ ವಿಚಾರದಲ್ಲಿ ಬಿಜೆಪಿ ಶಾಸಕರ ವಿರುದ್ಧ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC