ಚೇಳೂರು: ಗ್ರಾಮದ ಮಹಾಲಕ್ಷ್ಮಿ ಬ್ಯಾಂಕರ್ ಮತ್ತು ಜ್ಯುವೆಲ್ಲರ್ಸ್ ಗೆ ಕಳ್ಳರು ನುಗ್ಗಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಡಿಸೆಂಬರ್ 4ರಂದು ಬೆಳಗ್ಗೆ 9:30ರ ಸುಮಾರಿಗೆ ನಡೆದಿದೆ.
ಮಾಲಿಕ ಸುನೀಲ್ ಅಂಗಡಿಯ ಬಾಗಿಲು ತೆರೆದು ಪೂಜೆ ಮಾಡಿ, ವ್ಯಾಪಾರ ಆರಂಭಕ್ಕೆ ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ನಾಲ್ವರು ಅಂಗಡಿಗೆ ನುಗ್ಗಿ ಚಾಕು ತೋರಿಸಿದ್ದು, ನಂತರ ಹಲ್ಲೆ ನಡೆಸಿ, ಕೈಕಾಲು ಕಟ್ಟಿ ಹಾಕಲು ಯತ್ನಿಸಿದ್ದಾರೆ. ಕಳ್ಳರ ಪೈಕಿ ಒಬ್ಬಾತ ಅಂಗಡಿಯಿಂದ ಹೊರಗೆ ನಿಂತು ಯಾರಾದರೂ ಬರುತ್ತಾರೆಯೇ ಎಂದು ನೋಡುತ್ತಿದ್ದ. ಕಳ್ಳರ ನಡೆ ಕಂಡು ಭಯಭೀತರಾದ ಮಾಲಿಕ ಸುನೀಲ್ ಜೋರಾಗಿ ಕಿರುಚಿಕೊಂಡಿದ್ದು ಈ ವೇಳೆ ಅಂಗಡಿ ಸುತ್ತಮುತ್ತಲಿದ್ದ ಜನರು ಓಡಿ ಬಂದಿದ್ದಾರೆ. ಈ ವೇಳೆ ಕಳ್ಳರು ತಾವು ಬಂದಿದ್ದ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಪೊಲೀಸರ ಭಯವೇ ಇಲ್ಲದೇ ಕಳ್ಳರು ಹಾಡಹಗಲೇ ಈ ಕೃತ್ಯ ನಡೆಸಿರುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ನಗರ ಪ್ರದೇಶದಲ್ಲೇ ಅದೂ, ಹಗಲು ಹೊತ್ತಿನಲ್ಲೇ ಈ ರೀತಿಯಾಗಿ ಕಳ್ಳರು ಕಳ್ಳತನಕ್ಕಿಳಿದರೆ, ಇನ್ನೂ ಹಳ್ಳಿಗಳ ಪರಿಸ್ಥಿತಿ ಏನು ಅಂತ ಪ್ರಶ್ನೆಗಳು ಕೇಳಿ ಬಂದಿವೆ.
ಘಟನೆಯನ್ನು ಪೊಲೀಸರು ಕೂಡ ಗಂಭೀರವಾಗಿ ಪರಿಗಣಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಡಿವೈಎಸ್ಪಿ ಶೇಖರ್, ಚೇಳೂರಿನ ಪಿಎಸ್ ಐಗಳಾದ ಮಾಳಪ್ಪ ನಾಯ್ಕ ಡಿ, ನಾಗರಾಜು, ಹಾಗೂ ಸಿಬ್ಬಂದಿಗಳು, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ಮಾಡಿದರು. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


