ದೇವಸ್ಥಾನವೊಂದರಲ್ಲಿ ನಿಧಿಗಾಗಿ ಕಳ್ಳರು ಮೂರ್ತಿಯಿರುವ ಸ್ಥಳ ಅಗೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗದಗದ ಕದಾಂಪೂರ ಗ್ರಾಮದ ರಸ್ತೆಗೆ ಹೊಂದಿಕೊಂಡಿರುವ ಜಮೀನೊಂದರಲ್ಲಿ ಈ ಘಟನೆ ನಡೆದಿದೆ.
ಸೋಮೇಶ್ವರ ದೇವಾಲಯದ ಒಳಗೆ ಈಶ್ವರಲಿಂಗ ಮೂರ್ತಿಯ ಮುಂದೆ ಇದ್ದ ಬಸವಣ್ಣನ ಮೂರ್ತಿಯನ್ನು ಕಿತ್ತು ಹಾಕಿ, ಹತ್ತು ಅಡಿ ಆಳಕ್ಕೆ ಅಗೆಯಲಾಗಿದೆ. ನೂಲು ಹುಣ್ಣಿಮೆ ದಿನ ರಾತ್ರಿ ಈ ಪ್ರಕರಣ ನಡೆದಿದ್ದು, ಅರ್ಚಕರು ಮುಂಜಾನೆ ಪೂಜೆ ನೆರವೇರಿಸಲು ತೆರಳಿದಾಗ ಕೃತ್ಯ ಗಮನಕ್ಕೆ ಬಂದಿದೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ಅರ್ಚಕರು ತಿಳಿಸಿದ್ದಾರೆ. ಕಳ್ಳರು ನಿಧಿ ಶೋಧಕ್ಕಾಗಿ ವಾಮಾಚಾರ, ದಿಗ್ಧಂಧನ ಪೂಜೆ ನಡೆಸಿದ್ದಾರೆ.
ಗುಂಡಿ ತೋಡಿ ನಿಂಬೆಹಣ್ಣು, ಅರಿಶಿಣ, ಕುಂಕುಮ ಚೆಲ್ಲಿ ದುಷ್ಕರ್ಮಿಗಳು ನಿಧಿಗಾಗಿ ತೀವ್ರವಾಗಿ ಶೋಧಿಸಿದ್ದಾರೆ. ನಿಧಿಗಾಗಿ ನಡೆಸಿರುವ ವಾಮಾಚಾರ ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದು, ದೇವಾಲಯದ ಬಳಿ ತೆರಳಲು ಹೆದರುತ್ತಿದ್ದಾರೆ.


