ವರದಿ: ಮಂಜುಸ್ವಾಮಿ ಎಂ.ಎನ್.
ತುಮಕೂರು : ಸಾವಿರಾರು ಮರಗಳನ್ನು ನೆಟ್ಟು ‘ವೃಕ್ಷಮಾತೆ’ ಎಂದೇ ಹೆಸರುವಾಸಿಯಾಗಿರುವ ಪರಿಸರವಾದಿ, ಪದ್ಮಶ್ರೀ ಪುರಸ್ಕೃತ ಶತಾಯುಷಿಗಳಾದ ಸಾಲುಮರದ ತಿಮ್ಮಕ್ಕ ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸಾಲುಮರದ ತಿಮ್ಮಕ್ಕ ಅವರು ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಿಧನರಾಗಿದ್ದಾರೆ.
ಸಾಲುಮರದ ತಿಮ್ಮಕ್ಕ ಕರ್ನಾಟಕದ ಪರಿಸರವಾದಿಯಾಗಿದ್ದು. ಮಕ್ಕಳಿಲ್ಲದ ಕೊರಗನ್ನು ಬಿಟ್ಟು ಮರಗಳನ್ನೇ ತಮ್ಮ ಮಕ್ಕಳೆಂದು ತೀರ್ಮಾನಿಸಿ ತನ್ನ ಪತಿಯೊಂದಿಗೆ ರಾಮನಗರ ಜಿಲ್ಲೆಯ ಹುಲಿಕಲ್ ಮತ್ತು ಕುದೂರು ನಡುವೆ 4.5 ಕಿಲೋ ಮೀಟರ್ ಹೆದ್ದಾರಿಯ ಉದ್ದಕ್ಕೂ ಸುಮಾರು 385 ಆಲದ ಮರಗಳನ್ನು ನೆಟ್ಟು ಬೆಳೆಸಿದ ತಿಮ್ಮಕ್ಕ ಅವರು ಈವರೆಗೆ 8,000ಕ್ಕೂ ಹೆಚ್ಚು ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಅನಕ್ಷರಸ್ಥೆಯಾಗಿದ್ದರೂ ತಮ್ಮ ತಾಯಿಪ್ರೇಮವನ್ನು ಈ ಸಸಿಗಳ ಮೇಲೆ ತೋರಿಸಿ, ಅವುಗಳನ್ನು ಮಕ್ಕಳಂತೆ ಬೆಳೆಸಿದ್ದರು. ಇವರ ಕಾರ್ಯವನ್ನು ಗುರುತಿಸಿ ಭಾರತ ಸರ್ಕಾರವು 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
“ವೃಕ್ಷಮಾತೆ ತಿಮ್ಮಕ್ಕ”ನ ಪರಿಚಯ
ಸಾಲು ಮರದ ತಿಮ್ಮಕ್ಕನವರು ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ 1911ರ ಜೂನ್ 30 ರಂದು ಜನಿಸಿದರು. ತಂದೆ ಚಿಕ್ಕರಂಗಯ್ಯ, ತಾಯಿ ವಿಜಯಮ್ಮ. ಶಾಲೆಗೆ ಹೋಗಲು ಸಾಧ್ಯವಾಗದಿದ್ದ ಕಾರಣ ತಿಮ್ಮಕ್ಕ ತನ್ನ ಬಾಲ್ಯದ ಜೀವನದಲ್ಲಿ ದನಕರುಗಳನ್ನು ಮೇಯಿಸುತ್ತಿದ್ದರು. ನಂತರ ಹತ್ತಿರದ ಒಂದು ಕಲ್ಲು ಗಣಿಯಲ್ಲಿ ದಿನಗೂಲಿ ನೌಕರಳಾಗಿ ಕೆಲಸ ಮಾಡುತ್ತಿದ್ದರು. ನಂತರ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದವರಾದ ಚಿಕ್ಕಯ್ಯ ಎಂಬುವರನ್ನು ವಿವಾಹವಾಗಿದ್ದರು. ಅವರು ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯಲಿಲ್ಲ ಎನ್ನಲಾಗಿದೆ.
“ವೃಕ್ಷಮಾತೆ ತಿಮ್ಮಕ್ಕ”ಗೆ ಲಭಿಸಿದ ಪ್ರಶಸ್ತಿಗಳು
* ನಿಸ್ವಾರ್ಥ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಸಾಲುಮರದ ತಿಮ್ಮಕ್ಕ ನವರಿಗೆ 2019ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
* ರಾಷ್ಟ್ರೀಯ ಪೌರ ಪ್ರಶಸ್ತಿ.
* ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ.
* ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿಗಳೂ ತಿಮ್ಮಕ್ಕ ಅವರಿಗೆ ಲಭಿಸಿದೆ.
* ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
* ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸೇರಿ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.
* ಪರಿಸರಕ್ಕೆ ತಿಮ್ಮಕ್ಕ ನೀಡಿದ ಕೊಡುಗೆಯನ್ನು ಗಮನಿಸಿ ಅಮೆರಿಕಾದಲ್ಲಿರುವ ಪರಿಸರ ಶಿಕ್ಷಣ ಸಂಬಂಧಿತ ಸಂಸ್ಥೆಯೊಂದಕ್ಕೆ ತಿಮ್ಮಕ್ಕ ಹೆಸರನ್ನು ಇಡಲಾಗಿದೆ.
* ಪ್ರಸ್ತುತ ತಿಮ್ಮಕ್ಕ ನೆಟ್ಟಿರುವ ಮರಗಳನ್ನು ನಿರ್ವಹಣೆಯನ್ನು ಸರ್ಕಾರ ವಹಿಸಿಕೊಂಡಿದೆ.
ಗೌರವಗಳು: ಪರಿಸರ ಕಾಳಜಿಯನ್ನು ಗುರುತಿಸಿ ಭಾರತ ಸರ್ಕಾರವು ಅವರಿಗೆ ರಾಷ್ಟ್ರೀಯ ಪೌರ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದೆ. ಅಲ್ಲದೆ, ಅಮೇರಿಕಾದ ಲಾಸ್ ಏಂಜಲೀಸ್ ಮತ್ತು ಓಕ್ಲ್ಯಾಂಡ್ ನಲ್ಲಿರುವ ಪರಿಸರ ಶಿಕ್ಷಣ ಸಂಘಟನೆಯೊಂದಕ್ಕೆ ಇವರ ಹೆಸರನ್ನು ಇಡಲಾಗಿದೆ.
ಪರಿಸರ ಸಂರಕ್ಷಣೆ ಮತ್ತು ಕಾಳಜಿ: ಮಕ್ಕಳಿಲ್ಲದ ನೋವನ್ನು ಮರೆತು, ಆಲದ ಮರಗಳ ಸಸಿಗಳನ್ನು ನೆಟ್ಟು ಅವುಗಳನ್ನು ತಮ್ಮ ಮಕ್ಕಳಂತೆ ಬೆಳೆಸಿದರು. ಈ ಮರಗಳಿಗಾಗಿ ಅವರು ಬೇಲಿ ಹಾಕಿ, ನೀರು ಹಾಯಿಸಿ, ಕಾವಲು ಕಾಯುತ್ತಿದ್ದರು.
ತೆರೆಮೇಲೆ ಬರ್ತಿದೆ ‘ವೃಕ್ಷಮಾತೆ’ ಸಾಲುಮರದ ತಿಮ್ಮಕ್ಕನ ಜೀವನ:
ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ಜೀವನ ಚರಿತ್ರೆಯು ಸಿನಿಮಾ ರೂಪದಲ್ಲಿ ತೆರೆಗೆ ಬರಲಿದೆ. ‘ವೃಕ್ಷಮಾತೆ’ ಎಂಬ ಶೀರ್ಷಿಕೆಯ ಈ ಚಿತ್ರವನ್ನು ‘ಒರಟ’ ಶ್ರೀ ನಿರ್ದೇಶಿಸುತ್ತಿದ್ದು, ತುಮಕೂರು ಸುತ್ತಮುತ್ತ ಶೂಟಿಂಗ್ ಮಾಡಲಾಗುತ್ತಿದೆ.
ಪರಿಸರ ಸಂರಕ್ಷಣೆ ವಿಚಾರದಲ್ಲಿ ರಾಷ್ಟ್ರ–ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಿ ಮಹಿಳೆಯಾಗಿರುವ ತಿಮ್ಮಕ್ಕ, ಈಗ ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿಯಾಗಿದ್ದರು ಅವರ ಹೆಸರಿನಲ್ಲಿ ರಾಜ್ಯದಾದ್ಯಂತ ಪರಿಸರವನ್ನು ಅಭಿವೃದ್ಧಿ ಪಡಿಸಿರುವ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.
ವೃಕ್ಷಮಾತೆಗೆ ಅಂತಿಮ ನಮನ:
ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಅವರ ಅಗಲಿಕೆಯ ಸುದ್ದಿ ಮನಸ್ಸಿಗೆ ಆಘಾತ ತಂದಿದೆ. ಪರಿಸರ ಸಂರಕ್ಷಣೆಗೆ ತಮ್ಮ ಸಂಪೂರ್ಣ ಬದುಕನ್ನೇ ಅರ್ಪಿಸಿದ ತಿಮ್ಮಕ್ಕ ಅವರ ಅಪಾರ ಸೇವೆ ಸದಾ ಸ್ಮರಣೀಯ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
— ಡಾ.ಜಿ.ಪರಮೇಶ್ವರ್, ಗೃಹ ಸಚಿವರು. ಕರ್ನಾಟಕ ಸರ್ಕಾರ
ಕನ್ನಡ ನಾಡಿನ ಹಾಗೂ ಈ ವಿಶ್ವದಾದ್ಯಂತ ಪರಿಸರ ಸಂರಕ್ಷಣೆಗೆ ಹಾಗೂ ಪರಿಸರ ಸಂರಕ್ಷಣೆಯಿಂದ ಆಗುವ ಅನುಕೂಲಗಳನ್ನ ಈ ಜಗತ್ತಿಗೆ ಒಂದು ಮಾತನ್ನು ಆಡದೆ ಮೌನವಾಗಿ ಸಾರಿದ ಏಕೈಕ ಜೀವ ಎಂದರೆ ಅದು ಸಾಲುಮರದ ತಿಮ್ಮಕ್ಕನವರು. ಮರಗಳನ್ನು ಮಕ್ಕಳಂತೆಯೂ ಪರಿಸರವನ್ನು ಕುಟುಂಬದಂತೆಯೂ ಭಾವಿಸಿದ ಈ ಮಹಾತಾಯಿ ಸಾಲುಮರದ ತಿಮ್ಮಕ್ಕ, ಅಂತಹ ಮಹಾನ್ ಚೇತನ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರನ್ನ ಈ ದಿನ ನಾವು ಕಳೆದುಕೊಂಡಿದ್ದೇವೆ, ಮಾತೃ ಸ್ವರೂಪಿಯಾದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
— ಕೆ.ಆರ್.ಶಂಕರ್ ಗೌಡ್ರು, ಸಂಸ್ಥಾಪಕ ರಾಜ್ಯಾಧ್ಯಕ್ಷರು,. ಕರ್ನಾಟಕ ರಣಧೀರರ ವೇದಿಕೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


