ತುಮಕೂರು: ತುಮಕೂರು ನಗರದ ವ್ಯಾಪ್ತಿಯನ್ನು ವಿಸ್ತರಿಸುವ ಸಂಬಂಧ 14 ಗ್ರಾಮ ಪಂಚಾಯಿತಿಗಳನ್ನು ನಗರ ವ್ಯಾಪ್ತಿಗೆ ಒಳಪಡಿಸುವ ಚಿಂತನೆಯ ಇಂಗಿತವನ್ನು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ವ್ಯಕ್ತಪಡಿಸಿದರು.
ನಗರದ ಹೊರವಲಯ ಮೈದಾಳ ರಸ್ತೆಯಲ್ಲಿರುವ ಶ್ರೀ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸ್ನಾತಕೋತ್ತರ ಮಹಿಳೆಯರ ವಿದ್ಯಾರ್ಥಿ ನಿಲಯಕ್ಕೆ ಮಂಗಳವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು ನಗರವನ್ನು ವಿಸ್ತರಿಸುವ ಪ್ರಸ್ತಾವನೆ ಸಿದ್ಧವಿದ್ದು, ಹಂತ ಹಂತವಾಗಿ ವಿಸ್ತರಣಾ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೇ ಮನೆ ಕಟ್ಟಿಕೊಂಡು ವಾಸವಿರುವ ನಿವಾಸಿಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಅವರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಮರ್ಪಕ ಕುಡಿಯುವ ನೀರು, ರಸ್ತೆ, ಒಳಚರಂಡಿ ವ್ಯವಸ್ಥೆಯಿಲ್ಲದೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಗರ ವಿಸ್ತರಣೀಕರಣದಿಂದ ನಾಗರಿಕರಿಗೆ ಮೂಲಭೂತ ಸೌಕರ್ಯಗಳು ತಲುಪುತ್ತವೆ ಎಂದು ತಿಳಿಸಿದರು.
ಬಹು ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರ ವ್ಯಾಪ್ತಿಯು ಈಗಾಗಲೇ ನೆಲಮಂಗಲದವರೆಗೂ ತಲುಪಿದ್ದು, ತುಮಕೂರನ್ನೂ ಸಹ ತಲುಪುವ ಸಾಧ್ಯತೆ ಇದೆ. ನಗರದ ಬೆಳವಣಿಗೆಯನ್ನು ಮನಗಂಡ ಸರ್ಕಾರವು ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಪರಿಗಣಿಸಲು ಆದೇಶ ಹೊರಡಿಸಿದೆ. ಇದೇ ಮಾದರಿಯಲ್ಲಿಯೇ ಮುಂದಿನ ದಿನಗಳಲ್ಲಿ ತುಮಕೂರನ್ನೂ ಸಹ ಬೆಂಗಳೂರು ಉತ್ತರ ಎಂದು ಪರಿಗಣಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯದ ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು ಸೇರಿದಂತೆ ನಾಲ್ಕೈದು ಜಿಲ್ಲೆಗಳಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಗಣಿಗಾರಿಕೆ ನಡೆಸುತ್ತಿರುವ ಕಂಪನಿಗಳಿಂದ ಸರ್ಕಾರವು ಶೇಕಡಾ 2ರಷ್ಟು ಗಣಿ ನಿಧಿಯನ್ನು ಸಂಗ್ರಹಿಸಿ, ಈ ಹಣವನ್ನು ಗಣಿಬಾಧಿತ ಪ್ರದೇಶಗಳ ಪುನಃಶ್ಚೇತನಕ್ಕೆ ವೆಚ್ಚ ಮಾಡಲು ನಿರ್ಣಯಿಸಿದೆ. ರಾಜ್ಯದಲ್ಲಿ ಕಳೆದ 8–10 ವರ್ಷಗಳಲ್ಲಿ ಒಟ್ಟು ಸುಮಾರು 30,000 ಕೋಟಿ ರೂ.ಗಳ ಗಣಿನಿಧಿ ಹಣ ಸಂಗ್ರಹವಾಗಿದೆ. ಸಂಗ್ರಹವಾದ ಹಣವನ್ನು ಸರ್ಕಾರದ ಖಜಾನೆಗೆ ಜಮೆ ಮಾಡದೆ, ಗಣಿಬಾಧಿತ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಬಳಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ಗಣಿಗಾರಿಕೆಯಿಂದ ಪರಿಸರ ಹಾಗೂ ಗಣಿ ಪ್ರದೇಶದಲ್ಲಿ ವಾಸಿಸುವ ಜನಜೀವನದ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗಿರುವ ಹಿನ್ನೆಲೆಯಲ್ಲಿ, ಗಣಿನಿಧಿ ಮೊತ್ತವನ್ನು ಗಣಿಬಾಧಿತ ಪ್ರದೇಶಗಳಲ್ಲಿ ಪುನಶ್ಚೇತನ ಕಾರ್ಯಗಳಿಗೆ ಬಳಸುವ ತೀರ್ಮಾನ ಮಾಡಲಾಗಿದೆ ಎಂದರಲ್ಲದೆ ಜಿಲ್ಲೆಯ ಗಣಿಬಾಧಿತ ಗುಬ್ಬಿ, ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳ ಅಭಿವೃದ್ಧಿಗಾಗಿ 2,300 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ. ಗಣಿಬಾಧಿತ ತಾಲ್ಲೂಕುಗಳಲ್ಲಿ ಆಸ್ಪತ್ರೆ, ರಸ್ತೆ, ಶಾಲೆಗಳ ಅಭಿವೃದ್ಧಿಯೊಂದಿಗೆ 130 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಸ್ಪತ್ರೆಯ ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡವನ್ನು ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಪರಿಸರ ಸಂರಕ್ಷಣೆಯ ಭಾಗವಾಗಿ ಗಿಡ ನೆಡುವ ಕೆಲಸಕ್ಕೂ ಈ ಹಣವನ್ನು ಬಳಸಲಾಗುವುದು. ಇದಲ್ಲದೆ, ಈ ಮೂರು ತಾಲೂಕುಗಳ ವ್ಯಾಪ್ತಿಯ ಪೊಲೀಸ್ ಠಾಣಾ ಕಟ್ಟಡಗಳ ನಿರ್ಮಾಣಕ್ಕಾಗಿ 12 ಕೋಟಿ ರೂ. ಅನುದಾನವನ್ನು ಈಗಾಗಲೇ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW