ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ, ಆನಡಗು ಗ್ರಾಮದಲ್ಲಿ ಕೆಂಪಮ್ಮ ದೇವಿ ದೇವಾಲಯದ ಲೋಕಾರ್ಪಣೆಯನ್ನು ನಟ ಜಗ್ಗೇಶ್ ಅವರ ಉಪಸ್ಥಿತಿಯಲ್ಲಿ ನಡೆಸಲಾಯಿತು.
ತನ್ನದೇ ಹುಟ್ಟೂರು ಆದ ಆನಡಗೂ ಗ್ರಾಮದಲ್ಲಿರುವ ಕೆಂಪಮ್ಮ ದೇವಿ, ನಟ ಜಗ್ಗೇಶ್ ಅವರ ಮನೆದೇವರು ಕೂಡ ಆಗಿದ್ದು, ಈ ಲೋಕಾರ್ಪಣೆ ಕಾರ್ಯಕ್ಕೆ ಅವರ ಸಹೋದರ ಕೋಮಲ್ ಕೂಡ ಆಗಮಿಸಿ, ಅವರ ಕುಟುಂಬದವರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.
ಇದೇ ವೇಳೆ ಜಗ್ಗೇಶ್ ಮಾತನಾಡಿ, ನನ್ನ ಬದುಕಲ್ಲಿ ಈ ಜಾಗ ಒಂದು ರೀತಿ ಮಾನಸ ಸರೋವರ, ಕಾರಣ ಏನೆಂದರೆ, ಗ್ರಾಮೀಣ ಪ್ರದೇಶದ ನಾವುಗಳು ಈ ಮಟ್ಟಕ್ಕೆ ಬೆಳೆಯಬೇಕಾದರೆ ಗುರುಹಿರಿಯರ ನಮ್ಮ ತಂದೆ ತಾಯಿಗಳ ಜೊತೆಗೆ ಈ ಊರ ಗ್ರಾಮ ದೇವತೆ ಕೆಂಪಮ್ಮ ದೇವಿ ಹಾಗೂ ಭೈರವೇಶ್ವರ ಇವರುಗಳ ಆಶೀರ್ವಾದ ಇರುವುದರಿಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ, ನನ್ನ ಗ್ರಾಮದ ಜನತೆ ಹಾಗೂ ನನ್ನ ಎಲ್ಲಾ ಬಂಧುಗಳು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಚಿರಋಣಿ ಎಂದರು.
ಇದೇ ವೇಳೆ ಮಾಜಿ ಪ್ರಧಾನಿಯಾದ ದೇವೇಗೌಡ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲಾ ಭಕ್ತಾದಿಗಳಿಗೆ ಮಾಜಿ ಪ್ರಧಾನಿಯವರು ಕೆಂಪಮ್ಮ ದೇವಿಯವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸಿದರು. ಮಾತಿಗೂ ಮುನ್ನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಂದೇಶವನ್ನು ಫೋನ್ ಮೂಲಕ ಹೇಳಿಸಿದರು.
ಇನ್ನೂ ವೇದಿಕೆ ಕಾರ್ಯಕ್ರಮದಲ್ಲಿ ತುರುವೇಕೆರೆ ತಾಲೂಕಿನ ದಂಡಾಧಿಕಾರಿ ವೈ ಎಂ ರೇಣು ಕುಮಾರ್, ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆಂಪೇಗೌಡರು, ದಾನಿಗಳಾದ ಎರನಾಲು ಗ್ರಾಮದ ಕೆಂಪನಂಜೇಗೌಡರು, ನಿವೃತ್ತ ಶಿಕ್ಷಕ ಸಿ ಎನ್ ನಂಜುಂಡಪ್ಪ , ಜವರೇಗೌಡ , ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಲಿಂಗಪ್ಪ ಇನ್ನು ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತಾದಿಗಳು, ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಇನ್ನು ಅನೇಕ ಊರಿನ ಸುತ್ತಮುತ್ತ ಗ್ರಾಮಸ್ಥರು ಭಾಗಿಯಾಗಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


