ತುರುವೇಕೆರೆ: ಬಿಜೆಪಿಯ ಕೆಲವು ತಪ್ಪುಗಳಿಂದ ರಾಜ್ಯದಲ್ಲಿ ಪಕ್ಷಕ್ಕೆ ಈ ಸ್ಥಿತಿ ಬಂದಿದೆ. ಅಧಿಕಾರವನ್ನು ಕಳೆದುಕೊಂಡಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಅನೈತಿಕವಾದದ್ದು ಎಂದು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕೆಯೊಂದಿಗೆ ಹಿರಿಯೂರಿನ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ತುರುವೇಕೆರೆಗೆ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿರುವ ಡಿ.ಟಿ. ಶ್ರೀನಿವಾಸ್ ರವರ ಪರವಾಗಿ ಮತಯಾಚಿಸಲು ಆಗಮಿಸಿದ್ದೇನೆ. ಇಲ್ಲಿ ಬೆಮೆಲ್ ಕಾಂತರಾಜು ರವರರಲ್ಲಿ ಮಾತನಾಡಿದ್ದೇನೆ. ಅವರು ಸಂಪೂರ್ಣ ಬೆಂಬಲ ಇದೆಯೆಂದು ತಿಳಿಸಿದ್ದಾರೆ.
ಮಧ್ಯಾಹ್ನದ ವೇಳೆಗೆ ಆಗಮಿಸಲಿದ್ದಾರೆ. ನಾವುಗಳು ತಾಲ್ಲೂಕಿನ ಎಲ್ಲ ಶಾಲೆಗಳಿಗೆ ಭೇಟಿ ಕೊಟ್ಟು ಮತಯಾಚನೆಯನ್ನು ಮಾಡಲಿದ್ದೇವೆ. ಕ್ಷೇತ್ರದ ಎಲ್ಲ ಕಾಂಗ್ರೆಸ್ ನಾಯಕರುಗಳು ನಮ್ಮ ಜೊತೆಗಿದ್ದಾರೆ. ಹಿಂದೆ ಶ್ರೀನಿವಾಸ್ ರವರು ಆಗ್ನೇಯ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿ ಎರಡನೆಯ ಸ್ಥಾನ ಪಡೆದಿದ್ದರು. ಈಗ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರ ಪರವಾಗಿ ಮತ ಯಾಚನೆ ಮಾಡುತಿದ್ದೇನೆ ಎಲ್ಲಾ ಶಿಕ್ಷಕರುಗಳು ಬೆಂಬಲಿಸುವಂತೆ ಮನವಿ ಮಾಡಿದರು.
ಇನ್ನು ಎರಡು ಮೂರು ತಿಂಗಳಿನಲ್ಲಿ ಚುನಾವಣೆ ನಡೆಯಬಹುದು. ಈ ವರೆಗೆ ಐದು ಜಿಲ್ಲೆಗಳಲ್ಲಿ 21 ಸಾವಿರ ಮತದಾರರು ನೋಂದಾವಣೆಯಾಗಿದ್ದಾರೆ. ಈ ತಿಂಗಳ 30 ನೇ ತಾರೀಖಿನವರೆಗೂ ನೋಂದಣಿ ಮಾಡಲು ಸಮಯಾವಕಾಶವಿದೆ ಎಂದು ತಿಳಿಸಿದ ಅವರು, ಕಳೆದ 15 ದಿನಗಳಿಂದ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ನಾನು ಪ್ರವಾಸ ಕೈಗೊಂಡಿದ್ದೇನೆ, ಉತ್ತಮ ಬೆಂಬಲ ವ್ಯಕ್ತವಾಗಿದೆ. ಕಳೆದ ಮೂರು ಬಾರಿ ಗೆಲುವನ್ನು ಕಂಡಿರುವಂತವರು ಶಿಕ್ಷಕರ ನೋವುಗಳಿಗೆ ಸ್ಪಂದಿಸಿಲ್ಲದ ಕಾರಣ ಅವರಿಗೆ ಬೇಸರವಿದೆ. ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎನ್ನುವ ವಿಶ್ವಾಸ ನನಗಿದೆ. ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ತಿಳಿಸಿದರು.
ಬಿಜೆಪಿ ಬಿಡುವುದಕ್ಕೆ ಕಾರಣ ನಾನು ಮತ್ತು ನಮ್ಮ ತಂದೆ ಮೂಲತಃ ಕಾಂಗ್ರೆಸ್ ನಲ್ಲಿದ್ದವರು ಅವರು ಹಲವಾರು ಬಾರಿ ಶಾಸಕರಾಗಿ ಮಂತ್ರಿಯಾಗಿ ರಾಜ್ಯಕ್ಕೆ ಸೇವೆ ಸಲ್ಲಿಸಿದವರು. ಅನಿವಾರ್ಯ ಕಾರಣಗಳಿಂದ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದೆವು. ಈಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಮಾತಿಗೆ ಬೆಲೆ ಕೊಟ್ಟು ವಾಪಸ್ ಆಗಿದ್ದೇವೆ. ನಮಗೆ ಸಂತೋಷವಿದೆ ಎಂದರು.
ಎಲ್ಲ ಪಕ್ಷಗಳಲ್ಲೂ ಏಳು ಬೀಳು ಇದ್ದೇ ಇರುತ್ತದೆ. ಬಿಜೆಪಿಯ ಕೆಲವು ತಪ್ಪುಗಳಿಂದ ಈ ಸ್ಥಿತಿ ಬಂದಿದೆ. ರಾಜ್ಯದಲ್ಲಿ ಅಧಿಕಾರವನ್ನು ಕಳೆದು ಕೊಂಡಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಸರಿಯಾದುದಲ್ಲ, ಅನೈತಿಕವಾದದ್ದು. ನಮ್ಮ ಪಕ್ಷ ಮಾಡಿಕೊಂಡಿದ್ದರೆ ನಮ್ಮ ಕಡೆ ಬೆಟ್ಟುಮಾಡಿ ತೋರಿಸುತ್ತಿದ್ದರು. ಅಧಿಕಾರದ ಆಸೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಎಲ್ಲ ಪಕ್ಷಗಳಲ್ಲೂ ಅಧಿಕಾರದ ಆಸೆಯಿರುತ್ತದೆ. ಆದರೆ, ಅದರದೇ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಿದೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿ 20 ಸ್ಥಾನಗಳನ್ನು ಪಡೆಯಲಿದೆ. ಮತ್ತೊಮ್ಮೆ ಶಿಕ್ಷಕರಲ್ಲಿ ಮನವಿ ಮಾಡುತ್ತೇನೆ, ಡಿ.ಟಿ. ಶ್ರೀನಿವಾಸ್ ರವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್, ಕೊಳಾಲ ನಾಗರಾಜ್, ಉಪಾಧ್ಯಕ್ಷ ರೇಣುಕಾರಾಧ್ಯ , ಕಾರ್ಯದರ್ಶಿ ನಂಜುಂಡಪ್ಪ, ಸಿ.ಎಸ್. ಮೂರ್ತಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹನುಮಂತಯ್ಯ, ಶಶಿಶೇಖರ್, ಹೆಗ್ಗೇರಿವ ನರಸಿಂಹಯ್ಯ, ಪ್ರಕಾಶ್, ಗವಿರಂಗಯ್ಯ, ಮಹೇಂದ್ರ , ಶ್ರೀನಿವಾಸ್ ಸೇರಿದಂತೆ ಹಲವರು ಇದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ


