ಕೊರಟಗೆರೆ: ತಾಲ್ಲೂಕಿನ ಗೊರವನಹಳ್ಳಿ -ತೀತಾ ಗ್ರಾಮಗಳ ಮಧ್ಯೆ ಹಾದು ಹೋಗಿರುವ ತೀತಾ ಜಲಾಶಯದ ಕೋಡಿ ಹಳ್ಳಕ್ಕೆ ನಿರ್ಮಿಸಿರುವ ರಸ್ತೆಯ ಸೇತುವೆ ಕುಸಿದು ವಾಹನ ಸಂಚಾರ ಸ್ಥಗಿತಗೊಂಡಿದೆ.
ಕೊರಟಗೆರೆಯಿಂದ ದೊಡ್ಡಬಳ್ಳಾಪುರ ರಸ್ತೆ ಇದಾಗಿದ್ದು, ತಾಲ್ಲೂಕಿನಲ್ಲಿ ಸುರಿದ ಅತಿಯಾದ ಮಳೆ ಹಾಗೂ ತೀತಾ ಜಲಾಶಯವು ಕೋಡಿ ಬಿದ್ದು ನೀರು ರಸ್ತೆಯ ಮೇಲೆ ಹರಿದು, ಸೇತುವೆಯಲ್ಲಿ ಕುಸಿತ ಕಂಡು ಬಂದಿದೆ. ಇದರಿಂದ ಕೋಳಾಲ ಮಾರ್ಗವಾಗಿ ಗೊರವನಹಳ್ಳಿ ಲಕ್ಷ್ಮಿ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಹಾಗೂ ಮಾವತ್ತೂರು ದೊಡ್ಡಸಾಗ್ಗೆರೆ ಸುತ್ತಮುತ್ತಲ ಭಾಗದ ಜನರು ಕೊರಟಗೆರೆಗೆ ಪ್ರಯಾಣಿಸಲು ತೀವ್ರ ತೊಂದರೆ ಉಂಟಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಿದೆ.
ಕೂಡಲೇ ಕುಸಿದಿರುವ ಸೇತುವೆಯನ್ನು ದುರಸ್ಥಿಗೊಳಿಸಿ ಈ ಭಾಗದ ಜನರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕಿಸುವ ಈ ರಸ್ತೆಯ ಸೇತುವೆ ಕುಸಿದಿರುವ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಎಇಇ ಮಲ್ಲಿಕಾರ್ಜುನಯ್ಯ ಭೇಟಿ ನೀಡಿ ಪರಿಶೀಲಿಸಿ ಆದಷ್ಟು ಬೇಗ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳಲ್ಲಿ ತೀತಾ ಜಲಾಶಯ ಕೋಡಿ ಬಿದ್ದು ಈ ಸೇತುವೆಯ ಮೇಲೆ ನೀರು ಹರಿದಿತ್ತು. ಆದರೆ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ಸೇತುವೆ ಬಾಗಶ಼ಃ ಕುಸಿದಿದ್ದು ಈಗ ಸಂಪೂರ್ಣ ಕುಸಿದು ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ . ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪನವರ ಕಾಲದಲ್ಲಿ ನಿರ್ಮಾಣಗೊಂಡ ತೀತಾ ಜಲಾಶಯ . ಕಳೆದ 20ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಸೇತುವೆ . ಸರಿಯಾದ ನಿರ್ವಹಣೆ ಇಲ್ಲದೆ ಸೇತುವೆ ಕುಸಿತವಾಗಿದೆ ಎಂದು ಸ್ಥಳಿಯರ ಆರೋಪವಾಗಿದೆ.
ಕಾರ್ಮಿಕರು,ತುಮಕೂರು, ಕೊರಟಗೆರೆ ಸೇರಿದಂತೆ ಶಾಲಾ ಕಾಲೇಜುಗಳಿಗೆ ಹೊಗುವ ವಿದ್ಯಾರ್ಥಿಗಳು ಹಾಗೂ ತರಕಾರಿ,ಹೂವಿನ ಮಾರುಕಟ್ಟೆಗೆ ಹೊಗುವ ರೈತರಿಗೆ ಈ ಸೇತುವೆಯ ಕುಸಿತದಿಂದ ಬಹಳ ತೊಂದರೆಯಾಗುತ್ತಿದೆ ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ಗಮನ ಹರಿಸಿ ಈ ಭಾಗದ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ಸೇತುವೆ ಕುಸಿದು ಬಿದ್ದ ಪರಿಣಾಮವಾಗಿ ಗೊರವನಹಳ್ಳಿ ಮತ್ತು ತೀತಾ ಗ್ರಾಮಗಳ ಪ್ರಮುಖ ಸಂಪರ್ಕ ರಸ್ತೆ ಕಡಿತ ಗೊಂಡಿದೆ. ದೊಡ್ಡಸಾಗ್ಗರೆ, ಮಾವತ್ತೂರು ಮತ್ತು ಕೋಳಾಲ ಗ್ರಾಮಗಳಿಗೆ ಪ್ರಯಾಣಿಸುವ ರೈತರು ಕಾರ್ಮಿಕರು ಶಾಲೆಯ ಮಕ್ಕಳು ಕಾಲೇಜು ವಿದ್ಯಾರ್ಥಿಗಳು ಪ್ರತಿಯೊಬ್ಬರಿಗೂ ಅನುಕೂಲವಾಗುವ ರಸ್ತೆ.ಇದಾಗಿದೆ. ಮಹಾಲಕ್ಷ್ಮಿ ತಾಯಿ ಸನ್ನಿಧಿಗೆ ಬರುವ ಭಕ್ತರು ಕೋಲಾರ ದೊಡ್ಡಬಳ್ಳಾಪುರ ಈ ಭಾಗದಿಂದ ಬರುವ ಇದೇ ರಸ್ತೆಯನ್ನು ಉಪಯೋಗಿಸುತ್ತಿದ್ದಾರೆ ಈ ರಸ್ತೆಯ ದುರಸ್ತಿಯನ್ನು ತತ್’ಕ್ಷಣ ಮಾಡಬೇಕು.ಇದೇ ತೀತಾ ಜಲಾಶಯದ ಕೋಡಿ ನೀರು ತುಂಬುಗಾನಹಳ್ಳಿ ಗ್ರಾಮದ ಹತ್ತಿರ ಹರಿಯುತ್ತಿರುವುದರಿಂದ ಈ ಗ್ರಾಮದ ಮಕ್ಕಳು ಶಾಲೆಗೆ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಮರು ಸಂಪರ್ಕ ಒದಗಿಸುವಕ್ಕೆ ಹಾಗೂ ಪರ್ಯಾಯವಾಗಿ ಪಕ್ಕದಲ್ಲಿ ಓಡಾಡಲು ಅನುಕೂಲ ಕಲ್ಪಿಸಬೇಕು. ಹೊಸ ಬ್ರಿಡ್ಜ್ ಮಾಡಲು ತಡವಾಗುವುದರಿಂದ, ಪಕ್ಕದಲ್ಲಿ ತಾತ್ಕಾಲಿಕವಾಗಿ ಮರು ಸಂಪರ್ಕ ಒದಗಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಮಾಜಿ ಶಾಸಕ ಪಿ.ಆರ್. ಸುದಾಕರ್ ಲಾಲ್ ಮಾತನಾಡಿ, ನಾವು ಸರ್ಕಾರವನ್ನು ಒತ್ತಾಯ ಮಾಡುತ್ತೇವೆ.ಮುಂದಿನ ದಿನಗಳಲ್ಲಿ ಅವರು ಯಾವ ರೀತಿ ಕ್ರಮ ಕೈಕೊಳ್ಳುತ್ತಾರೆ ಎಂಬುದನ್ನು ನೋಡಿಕೊಂಡು ರೈತರು ಮತ್ತು ನಮ್ಮಪಕ್ಷದ ಮುಖಂಡರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪಿಡಬ್ಲ್ಯೂಡಿ ಇಲಾಖೆ ಎಇಇ ಮಲ್ಲಿಕಾರ್ಜುನ್ ಮಾತನಾಡಿ, ಭಾರೀ ವಾಹನ ಓಡಾಡಲು ಲಿಂಗಾಪುರ- ಹೊಳವನಹಳ್ಳಿ ಮಾರ್ಗವಾಗಿ ಓಡಾಡಬಹುದು. ಕೋಡಿಯ ನೀರು ನಿಲ್ಲಬೇಕು ನಿಲ್ಲದೇ ಹೊರತು ಏನು ಮಾಡಲಿ ಕ್ಕಾಗಲ್ಲ.ಮಳೆ ನಿಂತರೆ ಕೆಲಸ ಅಚ್ಚುಕಟ್ಟಾಗಿ ಬ್ರಿಡ್ಜ್ ನಿರ್ಮಾಣ ಮಾಡಬಹುದು. ನಾವು ಕ್ರಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿ ಗಳ ಅನುದಾನ ಬಳಸಿಕೊಂಡು ನಿರ್ಮಾಣ ಮಾಡಲು ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ.
ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಡಾ.ಜಿ.ಪರಮೇಶ್ವರ ಮಾತನಾಡಿ, ಈ ಭಾರಿ ನಮ್ಮ ತಾಲ್ಲೂಕಿನಲ್ಲಿ ಹೆಚ್ಚು ಉತ್ತಮ ಮಳೆಯಾಗಿದೆ. ಇನ್ನೂ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕೆರೆಗಳ ನಿರ್ವಹಣೆ ಜವಾಬ್ದಾರಿಯನ್ನು ಜಿ.ಪಂ.ಗೆ ನೀಡಿದ್ದಾರೆ. ಅದರೆ ಅವರು ಗ್ರಾಪಂಗಳಿಗೆ ವರ್ಗಾವಣೆ ಮಾಡಿದ್ದಾರೆ.ಗ್ರಾಪಂಗಳಲ್ಲಿ ಹಣ ಕೊರತೆ ಇರುವುದರಿಂದ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ.ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz