ಬೆಂಗಳೂರು: ಮೂವರು ಡ್ರಗ್ ಪೆಡ್ಲರ್ ಗಳನ್ನ ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಜೋಶುಹಾ, ನಿಸಾಮ್, ಅಬ್ದುಲ್ ಅಹದ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 52 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶಕ್ಕೆ ಪಡೆದಿದ್ದಾರೆ.
ಬೇಗೂರು ಮತ್ತು ಕೋರಮಂಗಲ ವ್ಯಾಪ್ತಿಯಲ್ಲಿ ಮಾದಕ ವಸ್ತು ಸಂಗ್ರಹ ಮಾಡಿಕೊಂಡಿದ್ದರು ಎಂಬ ಖಚಿತ ಮಾಹಿತಿ ಮೇರೆ ದಾಳಿ ನಡೆಸಿದ ಪೊಲೀಸರು ಆರೋಪಿಗಳಿಂದ 86. 89 ಗ್ರಾಂ. ಎಂ ಡಿ ಎಂ ಎ 100 ಎಲ್ ಎಸ್ ಸಿ ಸ್ಟ್ರಿಪ್ಸ್ ಸೇರಿದಂತೆ ಅನೇಕ ವಿಧದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ಬೇಗೂರಿನ ಹೊಂಗಸಂದ್ರದ ಅಯ್ಯಪ್ಪ ದೇವಸ್ಥಾನ ರಸ್ತೆಯ ಬಾಡಿಗೆ ಮನೆಯಲ್ಲಿ ವಿದೇಶಿ ಪ್ರಜೆಯು ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಜೋಶುನನ್ನು ಬಂಧಿಸಲಾಗಿದೆ. ಈತ ವರ್ಷದ ಹಿಂದೆ ಬಿಜಿನೆಸ್ ವೀಸಾ ಪಡೆದು ಭಾರತಕ್ಕೆ ಬಂದಿದ್ದು, 3 ತಿಂಗಳಿಂದ ನಗರದಲ್ಲಿ ನೆಲೆಸಿದ್ದ. ಈ ಸಂಬಂಧ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


