ತುರುವೇಕೆರೆ: ತಾಲೂಕಿನ ಹಲವಾರು ಟಿಎಪಿಎಸ್ ಸೇರಿದಂತೆ ತೊರೆಮಾವಿನಹಳ್ಳಿ ಟಿಎಪಿಎಸ್ ನಲ್ಲಿ ಬಾರಿ ಅಕ್ರಮ ಅವ್ಯವಹಾರಗಳು ನಡೆಯುತ್ತಿದ್ದು, ರೈತರಿಗಾಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿದ್ದಕ್ಕೆ ಉದ್ದೇಶಪೂರ್ವಕವಾಗಿ ನನ್ನನ್ನು ಅಧ್ಯಕ್ಷ ಸ್ಥಾನ ಮತ್ತು ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಲಾಯಿತು ಎಂದು ತೊರೆ ಮಾವಿನಹಳ್ಳಿ ಟಿಎಪಿಎಸ್ ಹಾಲಿ ನಿರ್ದೇಶಕ “ಪಂಚಾಕ್ಷರಿ” ಗಂಭೀರವಾಗಿ ಆರೋಪಿಸಿ ಗುಡುಗಿದರು.
ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ನ ಜಿಲ್ಲಾ ನಿರ್ದೇಶಕರಾದ ಸಿದ್ದಲಿಂಗಪ್ಪ ಎಂಬ ವ್ಯಕ್ತಿಯು ಕಡು ಭ್ರಷ್ಟನಾಗಿದ್ದು, ತಾಲೂಕಿನ ಸಹಕಾರ ಸಂಘಗಳಲ್ಲಿನ ಕೆಸಿಸಿ ಸಾಲದ ರಿನಿವಲ್ ಎಂಬ ಹೆಸರಿನಲ್ಲಿ ರೈತರಿಗೆ ಮಹಾ ವಂಚನೆ ಮಾಡಲಾಗಿದೆ, ತಾಲೂಕಿನಲ್ಲಿ ಒಟ್ಟಾರೆ 24 ಪಿ ಎ ಸಿ ಎಸ್ ಗಳು ಚಾಲ್ತಿಯಲ್ಲಿದ್ದು ಸುಮಾರು 25,000 ರೈತರ ಕೆಸಿಸಿ ಸಾಲದ ರಿನಿವಲ್ ಗೆ ಆಯಾ ಪಿಎಸಿಎಸ್ ಸಿಇಓ ಗಳು 500ರಿಂದ ಸಾವಿರ ರೂಗಳನ್ನು ವಸೂಲಿ ಮಾಡುತ್ತಿದ್ದು, ಅದರಲ್ಲಿ1 ರಿನಿವಲ್ ಗೆ 250 ರೂ.ಗಳಂತೆ ಡಿಸಿಸಿ ಬ್ಯಾಂಕ್ ತಾಲೂಕು ನಿರ್ದೇಶಕ ಸಿದ್ದಲಿಂಗಪ್ಪ ವರ್ಷಕ್ಕೆ 50 ಲಕ್ಷ ಪಡೆದುಕೊಂಡು, 5 ವರ್ಷಕ್ಕೆ 2.5 ಕೋಟಿಗೂ ಅಧಿಕವಾಗಿ ವಸೂಲಿ ಮಾಡುತ್ತಿದ್ದಾರೆ. ನಿಷ್ಠಾವಂತರಾದ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮಾಜಿ ಸಚಿವರಾದ ರಾಜಣ್ಣನವರಿಗೂ ಸಹ ಕಮಿಷನ್ ನೀಡಬೇಕು ಎಂದು ಅವರ ಹೆಸರಿಗೂ ಮಸಿ ಬಳಿಯುವ ಕೆಲಸ ಮಾಡಿ ಅವರ ಹೆಸರು ಹೇಳಿ ಕಲೆಕ್ಷನ್ ಮಾಡಲಾಗುತ್ತಿದೆ. ಈ ಭ್ರಷ್ಟಾಚಾರವನ್ನು ಖಂಡಿಸಿದ್ದಕ್ಕೆ ನನ್ನನ್ನು ತೊರೆ ಮಾವಿನಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಮತ್ತು ನಿರ್ದೇಶಕ ಸ್ಥಾನದಿಂದ ಅನರ್ಹ ಗೊಳಿಸಲಾಯಿತು ಎಂದು ಆರೋಪಿಸಿದ ಅವರು ತಾಲೂಕಿನಾದ್ಯಂತ ಸುಮಾರು 24 ಪಿ ಎ ಸಿ ಎಸ್ ಗಳಿದ್ದು ಹಲವಾರು ಸಹಕಾರ ಸಂಘಗಳಲ್ಲಿಯೂ ಸಹಾ ಅಕ್ರಮಗಳು ನಡೆಯುತ್ತಿದ್ದು, ಇದಕ್ಕೆಲ್ಲಾ ನಿರ್ದೇಶಕರು, ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಶಾಮೀಲು ಆಗಿದ್ದಾರೆ. ಉದಾಹರಣೆಗೆ ನಾನು ಸಂಘದಲ್ಲಿ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಕೆಸಿಸಿ ಸಾಲದ ಮೂರು ಬ್ಯಾಚ್ ರಿನಿವಲ್ ಗೆ ಸುಮಾರು 80 ಸಾವಿರಾರುಗಳನ್ನು ನಗದಾಗಿ ನೇರವಾಗಿ ಲಂಚವನ್ನು ಜಿಲ್ಲಾ ನಿರ್ದೇಶಕ ಸಿದ್ದಲಿಂಗಪ್ಪ ಅವರು ನೇರವಾಗಿ ಪಡೆದಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ನಮ್ಮ ಸಂಘಕ್ಕೆ ವೈಯಕ್ತಿತವಾಗಿ 15 ಲಕ್ಷ ಹಣವನ್ನು ಖರ್ಚು ಮಾಡಿದ್ದೇನೆ, ಪ್ರತಿಫಲವಾಗಿ ದಾಖಲೆಗಳಿಗಾಗಿ ಲಂಚವನ್ನು ನೀಡಬೇಕು ಎಂದು ಡಿಮ್ಯಾಂಡ್ ಮಾಡಿ ಹಣವನ್ನು ಪಡೆದರು.ಇದಕ್ಕೆ ಸಾಕ್ಷಿಯಾಗಿ ಜಿಲ್ಲಾ ಯೂನಿಯನ್ ಉಪಾಧ್ಯಕ್ಷರಾದ ವಿಜಯಕುಮಾರ್ ಅವರೇ ಮಾತುಕತೆ ನಡೆಸಿ ಹಣ ಕೊಡಿಸಿದ್ದರು. ಲಂಚವನ್ನು ಪಡೆದಿಲ್ಲ ಎಂದರೆ ಜಿಲ್ಲಾ ನಿರ್ದೇಶಕ ಸಿದ್ದಲಿಂಗಪ್ಪನವರೆ ನೀವು ನಮ್ಮ ಗ್ರಾಮದ ಗ್ರಾಮ ದೇವತೆಯ ಮುಂದೆ ಹಾರವನ್ನು ಹಾಕಿಕೊಂಡು ಪ್ರಮಾಣ ಮಾಡಿ ನಾನು ಸಹ ಪ್ರಮಾಣ ಮಾಡುತ್ತೇನೆ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.
ನಮ್ಮ ಗಮನಕ್ಕೆ ಬರದೆ ಸತ್ತವರ ಹೆಸರಿಗೆ ಲೋನ್ ಮಾಡಿಸಿದ್ದಾರೆ, ಮರಣ ಹೊಂದಿರುವ ಲೋಕಮ್ಮನಹಳ್ಳಿ, ಗಂಗಮ್ಮ ರಂಗಸ್ವಾಮಿ 21– 4 –25 ರಂದು ಮರಣ, 7—7–25 ರಂದು 20,000 ರಿನಿವಲ್. ಎನ್.ಮಾವಿನಹಳ್ಳಿ ಸಿದ್ದಗಂಗಮ್ಮ ಬೆಟ್ಟಪ್ಪ 19—8–24ರಂದು ಮರಣ, 17—7–25 ರಂದು 1 ಲಕ್ಷ ರೂಗಳು ರಿನಿವಲ್ ವಿತ್ ಡ್ರಾ ಮತ್ತು ಚೌಡೇನಹಳ್ಳಿ ಈಶ್ವರಯ್ಯ ಶೋಭಾ 21—10–24ರಂದು ಮರಣ.14—2–2ರಂದು ರಿನಿವಲ್ ಈ ಅಕ್ರಮಕ್ಕೆ ಡಿಸಿಸಿ ಬ್ಯಾಂಕ್ ಸೂಪರ್ವೈಸರ್ ಹರ್ಷ 10, ಸಾವಿರ ರೂಗಳನ್ನು ಲಂಚ ಪಡೆದು ಈ ಭ್ರಷ್ಟಾಚಾರ ಮಾಡುತ್ತಿದ್ದಾರೆ.
ನನ್ನನ್ನು ಅನರ್ಹ ಗೊಳಿಸಿದ ನಂತರ ನಾನು ಕಾನೂನಿನ ಮೊರೆ ಹೋಗಿ ಪುನಹ ಸಂಘದಲ್ಲಿ ನಿರ್ದೇಶಕನಾಗಿ ಕರ್ತವ್ಯ ನಿರ್ವಹಿಸಲು ಹೈಕೋರ್ಟ್ ನಿಂದ ಆದೇಶ ನೀಡಿದೆ. ಪುನಃ ನಾನು ಆಡಳಿತ ಮಂಡಳಿಗೆ ಸೇರಿ ನನ್ನನ್ನು ಚುನಾಯಿಸಿದ ರೈತರ ಏಳಿಗೆಗಾಗಿ ಶ್ರಮಿಸುತ್ತೇನೆ, ಈ ಭ್ರಷ್ಟಾಚಾರ ಅವ್ಯವಹಾರವನ್ನು ಪ್ರತಿ ಸಾರಿ ಖಂಡಿಸುತ್ತೇನೆ ಇದು ಹೀಗೆ ಮುಂದುವರೆದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
ಮಾಜಿ ಎಪಿಎಂಸಿ ಅಧ್ಯಕ್ಷರಾದ ರೇಣುಕಪ್ಪನವರು ಮಾತನಾಡಿ, ತೊರೆಮಾವಿನಹಳ್ಳಿ ಪಿ ಎ ಸಿ ಎಸ್ ನಲ್ಲಿ ಕೋಟ್ಯಂತರ ರೂಗಳನ್ನು ರೈತರು ಸಾರ್ವಜನಿಕರು ಎಫ್.ಡಿ. ಜಮೆ ಮಾಡಿದ್ದು, ಎಫ್ ಡಿ ಅವಧಿ ಮುಗಿದರು ಸಹಾ ಗ್ರಾಹಕರಿಗೆ ಹಣವನ್ನು ಹಿಂತಿರುಗಿಸಿದೆ ಸತಾಯಿಸುತ್ತಿದ್ದಾರೆ. ಸತ್ತವರ ಹೆಸರಿನಲ್ಲಿ ಕೆಸಿಸಿ ಸಾಲ ಮಾಡಿದ್ದಾರೆ ಎಂದು ದಾಖಲೆಗಳನ್ನು ಪ್ರದರ್ಶಿಸಿದರು. 2024ರಲ್ಲಿ ಸತ್ತ ವ್ಯಕ್ತಿ 2025ರಲ್ಲಿ ಸಾಲ ಪಡೆದಿರುವುದಾದರೂ ಹೇಗೆ ಈ ಭ್ರಷ್ಟಾಚಾರಕ್ಕೆ ಡಿಸಿಸಿ ಬ್ಯಾಂಕ್ ನ ಸೂಪರ್ವೈಸರ್ ಹರ್ಷ ನೇರ ಭಾಗಿಯಾಗಿದ್ದಾರೆ, ಇಂತಹ ಇನ್ನೂ ಹಲವಾರು ಅಕ್ರಮಗಳು ನಡೆದಿದ್ದು, ಕೂಡಲೆ ಸಂಘವನ್ನು ಸೂಪರ್ ಸೀಡ್ ಮಾಡಿ ಆಡಳಿತ ಅಧಿಕಾರಿಯನ್ನು ನೇಮಿಸಿ ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಈ ಸಂಬಂಧ ಈಗಾಗಲೇ ಲೋಕಾಯುಕ್ತದಲ್ಲಿ ದೂರನ್ನು ಸಹಾ ಸಲ್ಲಿಸಿದ್ದೇವೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ತಂಡಗ ಪಿಎಸಿಎಸ್ ನಿರ್ದೇಶಕ ಕೋಳಾಲ ರಘು ಮಾತನಾಡಿ, ತಂಡಗ ಪಿಎಸಿಎಸ್ ನಲ್ಲಿ 2022 ರಿಂದ 26ನೇ ಸಾಲಿನವರೆಗೂ ಸಾಲವೇ ಪಡೆಯದ ರೈತರ ಸಾಗುವಳಿ ಜಮೀನಿನ ಪಹಣಿಯಲ್ಲಿ ಕೆಸಿಸಿ ಸಾಲದ ಆಧಾರವು ನೋಂದಣಿಯಾಗಿದ್ದು ಇದು ಹೇಗೆ ಸಾಧ್ಯ ಹಾಗಾದರೆ ಸಾಲದ ಹಣವನ್ನು ಅಧಿಕಾರಿಗಳೇ ಪಡೆದುಕೊಂಡರೆ! ಕೆಸಿಸಿ ಸಾಲದ ರಿನಿವಲ್ ಹೆಸರಿನಲ್ಲಿ ರೈತರಿಗೆ ಆಗುತ್ತಿರುವ ಮೋಸವನ್ನು, ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಸಿದ್ದಲಿಂಗಪ್ಪನವರನ್ನು ಸಭೆಯಲ್ಲಿ ಪ್ರಶ್ನಿಸಿ ಘೇರಾವ್ ಸಹಾ ಹಾಕಲಾಯಿತು, ಏನನ್ನು ಉತ್ತರ ಕೊಡದೆ ಅಲ್ಲಿಂದ ಹೊರಟು ಹೋದರು. ಇಂತಹ ಭ್ರಷ್ಟಾಚಾರವನ್ನು ಕಂಡು ಕಾಣದಂತಿರುವ ನಿರ್ದೇಶಕರು ನಮಗ್ಯಾಕೆ ಬೇಕು, ಇವರ ಅವಶ್ಯಕತೆ ನಮಗಿಲ್ಲ ಮತ್ಯಾರಾದರೂ ಒಳ್ಳೆ ಆಡಳಿತ ನೀಡಲಿ ರಾಜೀನಾಮೆ ನೀಡಲಿ. ಕೂಡಲೇ ಈ ಅವ್ಯವಾರಗಳ ತನಿಖೆ ನಡೆಯದಿದ್ದರೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಜಿಲ್ಲಾ ಕೇಂದ್ರದಲ್ಲಿ ಹೋರಾಟ ಅನಿವಾರ್ಯ ಎಂದರು.
ಈ ವೇಳೆ ತೊರೆಮಾವಿನಹಳ್ಳಿ ಪಿಎಸಿಎಸ್ ಸಂಘದಲ್ಲಿ ಎಫ್ ಡಿ ಹಣ ಜಮೆ ಮಾಡಿರುವ ಹಲವಾರು ಮಹಿಳೆಯರು, ರೈತರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮ ಲಕ್ಷಾಂತರ ರೂ.ಗಳನ್ನು ಜಮೆ ಮಾಡಿರುವ ಬಾಂಡ್ ಗಳನ್ನು ಪ್ರದರ್ಶಿಸಿ, ಅವಧಿ ಮುಗಿದರು ನಮ್ಮ ಹಣವನ್ನು ಹಿಂದಿರುಗಿಸದೆ ನಮಗೆ ಅನ್ಯಾಯ ಮಾಡಿದ್ದಾರೆ ಮತ್ತು ಮತ್ತೊಬ್ಬ ರೈತ ಮಗನ ಮದುವೆ ಇದೆ ಎಫ್ಡಿ ಹಣ ಹಿಂತಿರುಗಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ನೋವನ್ನು ಹಂಚಿಕೊಂಡಿದ್ದು, ದೇವಸ್ಥಾನದ ಎಫ್ ಡಿ ಹಣ ಸೇರಿದಂತೆ ಇನ್ನಿತರ ಸಾರ್ವಜನಿಕರ ಯಾವುದೇ ಹಣವನ್ನು ಹಿಂದಿರುಗಿಸದೆ ಇರುವ ದಾಖಲೆಗಳನ್ನು ಪ್ರದರ್ಶಿಸಿ, ಸಂಘದ ಸಿಇಓ ನೋಡಲು ಸಹ ಸಿಗುತ್ತಿಲ್ಲ ಎಂದು, ನ್ಯಾಯಕ್ಕಾಗಿ ಸರ್ಕಾರಕ್ಕೆ ಅಳಲನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ಸಂಪಿಗೆ ಪಿಎಸ್ ಸಿಎಸ್ ಮಾಜಿ ಅಧ್ಯಕ್ಷ ಚಂದ್ರು. ಕೊಡಗಿಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಂಚೆಗೌಡ. ದಂಡಿನಶಿವರ ಪಿ ಎಸ್ ಎಸ್ ನಿರ್ದೇಶಕ ರಾಜ ಕುಮಾರ್. ಹಿರಿಯರಾದ ಚೌಡೇನಹಳ್ಳಿ ಬಸವರಾಜು. ಲೋಕಮ್ಮನಹಳ್ಳಿ ಚಂದ್ರಯ್ಯ. ಪ್ರವೀಣ್, ಸಂತೋಷ್, ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


