ತಿಪಟೂರು: ಗ್ರಾಮೀಣ ಸಮುದಾಯದ ಮಹಿಳೆಯರಿಗೆ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ನಿಟ್ಟಿನಲ್ಲಿ ತನ್ನದೇ ಆದ ವಿಶಿಷ್ಟತೆ ಹೊಂದಿರುವ ನಮ್ಮ ಆರೋಗ್ಯ ಕೇಂದ್ರ ಫೆಬ್ರುವರಿ 4 2024 ರಂದು ತನ್ನ ಪ್ರಥಮ ವರ್ಷಾಚರಣೆ ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ವಿಶೇಷ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.
ಕೆ.ಬಿ.ಕ್ರಾಸ್ ಮತ್ತು ಹಾಲ್ಕುರಿಕೆ ಗ್ರಾಮಗಳಲ್ಲಿ ಡಾ.ಹೇಮಾ ದಿವಾಕರ್ ಹಾಗೂ ನುರಿತ ವೈದ್ಯರುಗಳ ನೇತೃತ್ವದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ನಡೆದ ಈ ಆರೋಗ್ಯ ಶಿಬಿರದಲ್ಲಿ ಹೆಚ್ಚಾಗಿ ಮಹಿಳೆಯರು ಅಗತ್ಯ ವೈದ್ಯಕೀಯ ಸೇವೆ ಮತ್ತು ಸಮಾಲೋಚನೆ ಪಡೆದರು.
ನಮ್ಮ ಆರೋಗ್ಯ ಕೇಂದ್ರದ ವಾರ್ಷಿಕ ಸಂಭ್ರಮಾಚರಣೆ ಉದ್ದೇಶಿಸಿ ಮಾತನಾಡಿದ ನಮ್ಮ ಆರೋಗ್ಯ ಕೇಂದ್ರದ ಸಂಸ್ಥಾಪಕರು ಹಾಗೂ ಕಾಂಗ್ರೆಸ್ ಮುಖಂಡರಾಗಿರುವ C B ಶಶಿಧರ್ ರವರು ಗ್ರಾಮೀಣ ಸಮುದಾಯದ ಮೇಲೆ ಈ ಶಿಬಿರವು ಪರಿಣಾಮಕಾರಿಯಾಗಿ ಪ್ರಭಾವ ಬೀರಿದೆ, ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವುದು ನಮ್ಮ ಸಂಸ್ಥೆಯ ಸೇವಾಪರತೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ, ನಮ್ಮ ಆರೋಗ್ಯ ಕೇಂದ್ರದ ಪ್ರಥಮ ವರ್ಷಾಚರಣೆಗೆ ನನಗೆ ಬಹಳ ಹೆಮ್ಮೆಯಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಮ್ಮ ಆರೋಗ್ಯ ಕೇಂದ್ರದ CEO ಹಾಗೂ ವ್ಯವಸ್ಥಾಪಕರಾಗಿರುವ ಡಾ.ಹೇಮಾ ದಿವಾಕರ್ ಗ್ರಾಮೀಣ ಸಮುದಾಯಕ್ಕೆ ಆರೋಗ್ಯ ಸೇವೆಗಳು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ದೊರಕುತ್ತಿರುವುದು ನಮ್ಮ ಆರೋಗ್ಯ ಸಖಿಯರ ಸೇವಾ ಮತ್ತು ಸಮರ್ಪಣಾ ಮನೋಭಾವದಿಂದ ಮಾತ್ರ ಸಾಧ್ಯವಾಗಿದೆ ಎಂದು ನುಡಿದರು.
ಸಹ ಸಂಸ್ಥಾಪಕರಾದ ಎಂ.ಜೆ.ಶ್ರೀಕಾಂತ್ ರವರು ಗ್ರಾಮ ಸಮುದಾಯದ ಹೆಚ್ಚಿನ ಬೆಂಬಲ ಸಿಗುತ್ತಿರವುದಕ್ಕೆ ನಾನು ಎಂದಿಗೂ ಆಭಾರಿಯಾಗಿದ್ದೇನೆ, ನಮ್ಮ ಗ್ರಾಮೀಣ ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದೇ ನಮ್ಮ ಮುಂದಿನ ಗುರಿ ಎಂದು ತಿಳಿಸಿದರು.
ನಮ್ಮ ಆರೋಗ್ಯ ಕೇಂದ್ರದ ಕುರಿತು ಸಂಕ್ಷಿಪ್ತ ಮಾಹಿತಿ ಒಂದು ವರ್ಷಗಳ ಯಶಸ್ವಿ ಪಯಣ ಸಾಗಿಸುತ್ತಿರುವ ನಮ್ಮ ಆರೋಗ್ಯ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರು ಕಾಂಗ್ರೆಸ್ ಮುಖಂಡರು, ಜನಸ್ಪಂದನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾದ CB ಶಶಿಧರ್ ರವರು, ಡಾ.ಹೇಮಾ ದಿವಾಕರ್ ಸಂಸ್ಥೆಯ ವ್ಯವಸ್ಥಾಪಕರು ಹಾಗೂ ಕಾರ್ಯನಿರ್ವಹಣಾ ಅಧಿಕಾರಿ, ಸಹ-ಸಂಸ್ಥಾಪಕರು M.J.ಶ್ರೀಕಾಂತ್ (ಜನಸ್ಪಂದನ ಟ್ರಸ್ಟ್) ನಮ್ಮ ಆರೋಗ್ಯ ಕೇಂದ್ರ ಗ್ರಾಮೀಣ ಸಮುದಾಯದ ಆರೋಗ್ಯ ಸುಧಾರಣೆಗೆ ಕಂಕಣ ಬದ್ಧವಾಗಿದೆ, ಮಹಿಳೆಯರಿಗೆ ಆರೋಗ್ಯ ಸಮಾಲೋಚನೆ, ಆರೋಗ್ಯ ಸಖಿಯರು ಮಹಿಳೆಯರ ಮನೆಮನೆಗೂ ಭೇಟಿ ನೀಡಿ ಉಚಿತವಾಗಿ ಆರೋಗ್ಯ ಸಲಹೆಗಳು ಮತ್ತು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.
ಉಚಿತವಾಗಿ ಬಿ.ಪಿ ಮತ್ತು ರಕ್ತ ತಪಾಸಣೆ ಹಾಗೂ ಇನ್ನಿತರ ವೈದ್ಯಕೀಯ ನೆರವು ಸಹ ದೊರೆಯುತ್ತಿದೆ. ವೈದ್ಯಕೀಯ ಸೌಲಭ್ಯಗಳ ತಂತ್ರಜ್ಞಾನ, ಅನುಭವಿ ವೈದ್ಯರುಗಳಿಂದ ಆಪ್ತಸಮಾಲೋಚನೆ, ಆಧುನಿಕ ಪ್ರಾಥಮಿಕ ಚಿಕಿತ್ಸಾ ವಿಧಾನಗಳು, ಟೆಲಿಮೆಡಿಸನ್ ಜೊತೆಗೆ ಸಂಪರ್ಕ ಹೊಂದಿದ್ದು ಜನಸಮೂಹದೊಟ್ಟಿಗೆ ಸಕ್ರಿಯ ಸಹಭಾಗಿತ್ವ ಹೊಂದಿದೆ. 10 ಮಂದಿ ಆರೋಗ್ಯ ಸಖಿಯರನ್ನು ವಿಶೇಷವಾಗಿ ನೇಮಿಸಿಕೊಳ್ಳಲಾಗಿದೆ, 1200 ಕ್ಕಿಂತ ಹೆಚ್ಚಿನ ರೋಗಿಗಳು ನಮ್ಮ ಆರೋಗ್ಯ ಕೇಂದ್ರದ ಸೇವೆಗಳ ಫಲಾನುಭವಿಗಳಾಗಿದ್ದಾರೆ. ಸಂಸ್ಥೆಯ ಎಲ್ಲಾ ಸಿಬ್ಬಂದಿ ಆರೋಗ್ಯ ಜಾಗೃತಿಗಾಗಿ ಸದಾ ಕ್ರಿಯಾಶೀಲವಾಗಿ ಶ್ರಮಿಸುತ್ತಿದ್ದಾರೆ.
ತಿಪಟೂರು ಗ್ರಾಮೀಣ ಸಮುದಾಯದೊಟ್ಟಿಗೆ ತನ್ನದೇ ಆದ ಅಸ್ತಿತ್ವವನ್ನು ಸೃಷ್ಟಿಸಿಕೊಂಡಿದ್ದು ಖಾಸಗಿ ವಲಯದ ನಮ್ಮ ಆರೋಗ್ಯ ಕೇಂದ್ರವು ಯಶಸ್ವಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ, ಒಂದು ವರ್ಷದ ಗುರುತರವಾದ ಹೆಜ್ಜೆಗಳನ್ನಿಡುತ್ತಾ ‘ಗುಣಮಟ್ಟದ ಆರೋಗ್ಯದ ರಕ್ಷಣೆ-ನಮ್ಮ ಹೊಣೆ’ ಎಂಬ ಧ್ಯೇಯದೊಂದಿಗೆ ತಿಪಟೂರಿನಲ್ಲಿ ತನ್ನದೇ ಆದ ಅಸ್ಮಿತೆ ಹೊಂದಿದೆ.
ವರದಿ: ಆನಂದ ತಿಪಟೂರು