ತಿಪಟೂರು : ನನ್ನ ಕಣ್ಣೀರನ್ನು ನೋಡಿ ಹಲವಾರು ನಾಟಕವೆನ್ನುತ್ತಾರೆ, ಆದರೆ ಇದು ರಾಜ್ಯದ ಜನತೆಯ ಸಂಕಷ್ಟವನ್ನು ನೋಡಿ ಬರುತ್ತಿರುವ ಕಣ್ಣೀರು, ಹೃದಯದಿಂದ ಬರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾವುಕರಾಗಿ ನುಡಿದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕೆ.ಟಿ.ಶಾಂತಕುಮಾರ್ ಜೆ.ಡಿ.ಎಸ್ ಸೇರ್ಪಡೆ ಹಾಗೂ ಜೆ.ಡಿ.ಎಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಕಣ್ಣೀರು ಹಾಕುವುದನ್ನು ನೋಡಿ, ಕೆಲವರು ಗೇಲಿ ಮಾಡುತ್ತಾರೆ. ಯಾರ ಹೃದಯದಲ್ಲಿ ನೋವಿರುತ್ತದೋ ಅದು ಕಣ್ಣೀರಾಗಿ ಹರಿಯುತ್ತದೆ. ನನ್ನ ಕಣ್ಣೀರು ಅಂತಹದ್ದು ಎಂದರು.
ರಾಜ್ಯದಲ್ಲಿ 2 ರಾಷ್ಟ್ರೀಯ ಪಕ್ಷಗಳು ಅಧಿಕಾರವನ್ನು ಮಾಡುತ್ತಾ ಜನರಿಗೆ ಇಲ್ಲದ ತೆರಿಗೆ ಹಾಕಿ ಜನರ ದುಡ್ಡಿನಲ್ಲಿ ಸರ್ಕಾರಿ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆಯೇ , ಹೊರತು ಯಾವುದೇ ಕಾರಣಕ್ಕೂ ಜನರ ಸಮಸ್ಯೆಯ ಬಗ್ಗೆ ಕಾಳಜಿ ಅವರಿಗಿಲ್ಲ. ಇವರಿಗೆ ಜನರ ಮತಗಳು ಮಾತ್ರ ಬೇಕು, ಜನರ ಸಮಸ್ಯೆ ಬೇಡ. ಇಂತಹ ರಾಜಕಾರಣಿಗಳು ನಿಮಗೇ ಬೇಕೆ ಎಂದು ಪ್ರಶ್ನಿಸಿದ ಅವರು, ನಾನು ಪಂಚರತ್ನ ಯಾತ್ರೆಯನ್ನು ಯಶಸ್ವಿಯಾಗುತ್ತಿರುವುದು ಅವರ ಕಣ್ಣುರಿಯಾಗುತ್ತಿದೆ. ಅವರು ಕಣ್ಣೀರು ಹಾಕುವ ಪರಿಸ್ಥಿತಿಗೆ ಬರುತ್ತದೆ ಎನ್ನುವ ಭಯವನ್ನು ಕಾಡುತ್ತಿದೆ. ಇನ್ನು ರಾಜ್ಯದಲ್ಲಿ ಜೆ.ಡಿ.ಎಸ್ ಗೆ ಸಂಪೂರ್ಣ ಅಧಿಕಾರ ನೀಡಿದರೆ ನಮ್ಮ ಆರೋಗ್ಯ, ಶಿಕ್ಷಣ, ಸ್ತ್ರೀಯರ ಅಭ್ಯುದಯ, ರೈತರ ಚೈತನ್ಯ, ವಸತಿ ಸೇರಿದಂತೆ ಜನರಿಗೆ ನೆಮ್ಮದಿಯ ಆಳ್ವಿಕೆನ್ನು ನೀಡುವುದೇ ನಮ್ಮ ಗುರಿಯಾಗಿದೆ. ನಮ್ಮ ಪಕ್ಷ ಸಿದ್ಧಾಂತವನ್ನು ಮೆಚ್ಚಿ ಬಂದಿರುವ ಕೆ.ಟಿ.ಶಾಂತ್ಕುಮಾರ್ ಬೆಂಬಲಿಸಿ ಜೆ.ಡಿ.ಎಸ್ಅನ್ನು ಅಧಿಕಾರಕ್ಕೆ ತರುವುದೇ ನಿಮ್ಮ ಗುರಿಯಾಗಬೇಕೆಂದು ಕರೆನೀಡಿದರು.
ಜೆ.ಡಿ.ಎಸ್ ಪಕ್ಷ ಸೇರ್ಪಡೆಗೊಂಡು ಮಾತನಾಡಿದ ಕೆ.ಟಿ.ಶಾಂತ್ಕುಮಾರ್, ನಾನು ಬಂದಿದ್ದೇ ಕುಮಾರಣ್ಣನ ಪೋಟೋ ಹಾಕಿಕೊಂಡು, ಜನಸೇವೆ ಮಾಡಿದೆ, ಬರಗಾಲದಲ್ಲಿ ಕುಡಿಯುವ ನೀರನ್ನು ಕೊಟ್ಟಿದ್ದೇನೆ, ಕೊರೊನಾ ಸಂಕಷ್ಟದಲ್ಲಿ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ನನಗೆ ಜೆ.ಡಿ.ಎಸ್ ನೆಲೆ ನೀಡಿದ್ದು, ಇಲ್ಲಿಯೇ ದುಡಿದು ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಪ್ರಮಾಣಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ, ಮಾಜಿಶಾಸಕರುಗಳಾದ ಎಂ.ಟಿ.ಕೃಷ್ಣಪ್ಪ, ಡಿ.ನಾಗರಾಜಯ್ಯ, ಸುರೇಶ್ಬಾಬು, ಜೆಡಿಎಸ್ ಮುಖಂಡ ಬೋಜೇಗೌಡ, ಜಕ್ಕನಹಳ್ಳಿ ಲಿಂಗರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜನಪ್ಪ, ತಾಲ್ಲೂಕು ಕಾರ್ಯಧ್ಯಕ್ಷ ಸೂಗೂರು ಶಿವಸ್ವಾಮಿ, ಮಾಜಿ ನಗರಸಭಾ ಸದಸ್ಯೆ ರೇಖಾ ಅನುಪ್, ಮಾಜಿ ಜಿ.ಪಂ.ಸದಸ್ಯೆ ರಾಧಾ ನಾರಾಯಣಗೌಡ ಸೇರಿದಂತೆ ಹಲವರು ಇದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


