ತಿಪಟೂರು: ನಗರದ ಹೊರವಲಯದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ 119 ರಾಗಿ ಚೀಲಗಳನ್ನು ತಹಶೀಲ್ದಾರ್ ಮೋಹನ್ ಕುಮಾರ್ ನೇತೃತ್ವದ ತಂಡ ಸೋಮವಾರ ಮಧ್ಯಾಹ್ನ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದೆ.
ನಗರದ ಬಂಡಿಹಳ್ಳಿ ಶೆಟ್ಟಿಕೆರೆ ರಸ್ತೆಯ ಮಠದ ಮರುಳಪ್ಪ ಲೇಔಟ್ ನಲ್ಲಿ ಲಾರಿಯಿಂದ ಟ್ರ್ಯಾಕ್ಟರ್ ಗೆ ರಾಗಿ ಚೀಲಗಳನ್ನು ವರ್ಗಾಯಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಹಾಗೂ ಆಹಾರ ನಿರೀಕ್ಷಕರು ದಾಳಿ ನಡೆಸಿದರು. ಈ ವೇಳೆ ಆಂಧ್ರಪ್ರದೇಶ ಮೂಲದ ಲಾರಿಯಲ್ಲಿದ್ದ ರಾಗಿ ದಾಸ್ತಾನನ್ನು ವಶಪಡಿಸಿಕೊಳ್ಳಲಾಯಿತು.
ದಾವಣಗೆರೆಯಿಂದ ಅಕ್ರಮವಾಗಿ ರಾಗಿಯನ್ನು ತಂದು, ಇಲ್ಲಿನ ರೈತರ ಹೆಸರಿನಲ್ಲಿ ಸರ್ಕಾರಿ ರಾಗಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡುವ ಉದ್ದೇಶವನ್ನು ಈ ತಂಡ ಹೊಂದಿತ್ತು ಎನ್ನಲಾಗಿದೆ. ಹಾಲ್ಕುರಿಕೆ ಗ್ರಾಮದ ಸತೀಶ್ ಎಂಬುವವರು ಈ ಅಕ್ರಮ ವ್ಯವಹಾರದ ಹಿಂದೆ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಮಾಹಿತಿ ನೀಡಿದ ತಹಶೀಲ್ದಾರ್ ಮೋಹನ್ ಕುಮಾರ್ ಅವರು, “ಬಂಡೀಹಳ್ಳಿ ಗೇಟ್ ಬಳಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ದಾಳಿ ಮಾಡಿದ್ದೇವೆ. ಟ್ರ್ಯಾಕ್ಟರ್ ಹಾಗೂ ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದರು.
ಪ್ರಸ್ತುತ ವಶಪಡಿಸಿಕೊಂಡ ರಾಗಿ ಚೀಲಗಳು ಹಾಗೂ ವಾಹನಗಳನ್ನು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


