ಒಮ್ಮೆ ಒಬ್ಬ ರಾಜ ಕುದುರೆ ಏರಿ ವನವಿಹಾರ ಮಾಡುತ್ತಾ, ಸೈನಿಕರಿರುವ ತನ್ನ ಬಿಡಾರದಿಂದ ಕಾಡಿನ ಸೌಂದರ್ಯ ಸವಿಯಲು ಬಹಳ ದೂರ ಒಬ್ಬನೇ ಬಂದು ಬಿಡುತ್ತಾನೆ. ಇತ್ತ ಬಿಡಾರಗಳಲ್ಲಿ ವಿಹರಿಸುತ್ತಿದ್ದ ಸೈನಿಕರು ರಾಜನಿಲ್ಲದಿರುವುದನ್ನು ಕಂಡು ರಾಜನನ್ನು ಹುಡುಕುತ್ತಾ ಹೊರಡುತ್ತಾರೆ. ಇತ್ತ ರಾಜ ಕಾಡಿನ ಒಂದು ಪ್ರದೇಶಕ್ಕೆ ಬಂದು ಒಂದು ಮರದ ಕೆಳಗೆ ಕುದುರೆ ನಿಲ್ಲಿಸುತ್ತಾನೆ. ಇದ್ದಕ್ಕಿದ್ದಂತೆ ಮರೆಯಲ್ಲಿದ್ದ ಅಡಗಿದ್ದ ಶತ್ರುಗಳು ಕುದುರೆ ಏರಿಕೊಂಡು ಬಂದು ರಾಜನನ್ನು ಮುತ್ತಿಗೆ ಹಾಕುತ್ತಾರೆ, ಆದರೆ ರಾಜ ಖತ್ತಿಯನ್ನು ಬಿಡಾರದಲ್ಲೇ ಬಿಟ್ಟು ಬಂದಿರುತ್ತಾನೆ, ಖತ್ತಿ ಹಿಡಿದ ಶತ್ರುಗಳು ಸುತ್ತಲೂ ರಾಜನನ್ನು ಸುತ್ತುವರಿಯುತ್ತಾರೆ, ಈಗೇನು ಮಾಡುವುದು ಅಂದುಕೊಳ್ಳುವಾಗ ಅದೇ ಮರದ ಮೇಲೆ ಕಟ್ಟಿಗೆ ಕಡಿಯಲೆಂದು ಖತ್ತಿ ಹಿಡಿದು ಹತ್ತಿದ್ದ ಜವರನೆಂಬ ವ್ಯಕ್ತಿ ಮಹಾರಾಜರೇ ತೆಗೆದುಕೊಳ್ಳಿ ಎಂದು ತನ್ನ ಕೈಲಿದ್ದ ಖತ್ತಿಯನ್ನು ರಾಜನ ಎದುರು ಬೀಳುವಂತೆ ಕೆಳಗೆ ಎಸೆಯುತ್ತಾನೆ. ರಾಜ ಆ ಖತ್ತಿಯನ್ನು ತೆಗೆದುಕೊಂಡು ಶತ್ರುಗಳನ್ನು ಸದೆಬಡಿಯುತ್ತಾನೆ, ಉಳಿದ ಶತ್ರುಗಳು ಅಲ್ಲಿಂದ ಪಲಾಯನಗೈಯುತ್ತಾರೆ.
ನಂತರ, ಜವರನು ಮರದಿಂದ ಕೆಳಗೆ ಇಳಿದು ಬರುತ್ತಾನೆ. ಆಗ ರಾಜ ಜವರನ ಸಮಯ ಪ್ರಜ್ಞೆಗೆ ಮೆಚ್ಚಿ ನಾಳೆ ನಿನ್ನನ್ನು ಅರಮನೆಯಲ್ಲಿ ಸನ್ಮಾನಿಸುತ್ತೇನೆ ಎಂದು ಅವನ ಖತ್ತಿಯನ್ನು ಅವನಿಗೆ ಹಿಂತಿರುಗಿಸಿ, ನಂತರ ಅಲ್ಲಿಗೆ ಬಂದ ತನ್ನ ಸೈನಿಕರೊಡನೆ ಹೊರಡುತ್ತಾನೆ. ಜವರನು ತನ್ನ ಮನದಲ್ಲಿ ತಾನು ಮಹಾಜರ ಪ್ರಾಣವನ್ನು ಕಾಪಾಡಿದೆ ಎಂಬ ಹುಮ್ಮಸ್ಸಿನ ಪಿತ್ತ ನೆತ್ತಿಗೇರಿದಂತವನಾಗಿ ಹೊರಡುತ್ತಿದ್ದ ರಾಜನನ್ನು ತಡೆದು ರಾಜರೇ ನಿಮ್ಮನೊಂದು ಪ್ರಶ್ನೆ ಕೇಳಲೇ ಎಂದಾಗ ರಾಜ ಆಗಲೆಂದು ತಲೆ ಆಡಿಸುತ್ತಾನೆ ಆಗ ಜವರನು ಶತ್ರುಗಳು ನಿಮ್ಮನ್ನು ಮುತ್ತಿಗೆ ಹಾಕಿದಾಗ ನಿರಾಯುಧರಾಗಿದ್ದ ನಿಮಗೆ ಮನಸ್ಸಿನಲ್ಲಿ ಹೇಗೆ ಅನ್ನಿಸಿತು ಅಂದಾಗ ರಾಜನ ಕೋಪ ನಿತ್ತಿಗೇರಿ, ಕೋಪ ಸಹಿಸದ ರಾಜನು ಜವರನ ಕೈಲಿದ್ದ ಖತ್ತಿಯನ್ನು ಕಿತ್ತುಕೊಂಡು, ತನ್ನ ಸೈನಿಕರಿಗೆ ಕೂಡಲೇ ಇವನನ್ನು ಬಂಧಿಸಿ, ರಾಜನನ್ನು ಪ್ರಶ್ನಿಸುವ ದುಸ್ಸಾಹಸ ಮಾಡಿದ್ದಾನೆ, ಕೂಡಲೇ ಇವನಿಗೆ ಗಲ್ಲು ಶಿಕ್ಷೆ ನೀಡುತ್ತಿದ್ದೇನೆ ಎಂದಾಗ ಜವರನು ಅತ್ಯಂತ ಭಯಬೀತನಾಗಿ ಪ್ರಭು ನನ್ನನ್ನು ಕ್ಷಮಿಸಿ ನಾನು ಈ ಸನ್ನಿವೇಶದಲ್ಲಿ ಇಂತಹ ಪ್ರಶ್ನೆ ಕೇಳಬಾರದಿತ್ತು, ನನ್ನನ್ನು ಶಿಕ್ಷಿಸಬೇಡಿ ನನ್ನದು ತಪ್ಪಾಯಿತು ಎಂದು ಎಷ್ಟು ಪರಿಪರಿಯಾಗಿ ಕೇಳಿದರೂ ಕೇಳದ ರಾಜನು ಅವನಿಗೆ ಸರಪಣಿ ಬಿಗಿಸಿ ಅರಮನೆಗೆ ಎಳೆದುಕೊಂಡು ಬರುತ್ತಾನೆ.
ದಾರಿಯುದ್ದಕ್ಕೂ ತನಗೆ ಬರಲಿರುವ ಸಾವಿನ ನೋವನ್ನು ನೆನೆದುಕೊಂಡು ಅರಚಾಡುತ್ತಾ, ಕಿರುಚಾಡುತ್ತಾ ಬರುತ್ತಾನೆ. ಕೊನೆಗೆ ನೇಣಿನ ಕಂಬದ ಮೇಲೆ ನಿಲ್ಲಿಸುತ್ತಾರೆ, ಆಗ ಜವರನು ದಯೆತೋರಿ ಪ್ರಭು ನನ್ನ ಅಹಂನಿಂದ ನಾನು ಇಂತಹ ಪ್ರಶ್ನೆ ಕೇಳಿದ್ದು ನನಗೆ ಅರಿವಾಯಿತು ನನ್ನನ್ನು ಬಿಟ್ಟು ಬಿಡಿ ಎಂದಾಗ ರಾಜನು ಅವನ ಹತ್ತಿರಕ್ಕೆ ಬಂದು ನೋಡು ನಿನಗೆ ನಿನ್ನ ಮನಸ್ಸಿನಲ್ಲಿ ಈಗ ಹೇಗೆ ಅನ್ನಿಸುತ್ತಿದೆಯೋ ಹಾಗೆಯೇ, ನನಗೂ ನಿರಾಯುಧನಾದ ನನ್ನ ಮೇಲೆ ಇದ್ದಕ್ಕಿದ್ದಂತೆ ಆಕ್ರಮಣ ಮಾಡಿದಾಗ ನನಗೂ ಹೀಗೆಯೇ ಅನ್ನಿಸಿತು. ರಾಜನಾಗುವ ಮೊದಲು ನಾನು ಕೂಡ ನಿನ್ನ ಹಾಗೆ ಒಬ್ಬ ಮನುಷ್ಯ, ಇದ್ದಕ್ಕಿದ್ದಂತೆ ಬರುವ ಸಾವಿಗೆ ಯಾರೂ ಭಯ ಪಡುವುದಿಲ್ಲ ಆದರೆ, ಸಾವು ತನ್ನ ಕಣ್ಣ ಮುಂದೆ ಇದ್ದಾಗ ಎಲ್ಲರಿಗೂ ಸಹಜವಾಗಿಯೇ ನನ್ನ ಬದುಕು ಹೀಗೆ ಅಂತ್ಯವಾಗುತ್ತಿದೆಯಲ್ಲಾ ಎಂಭ ಭಯ ಉಂಟಾಗುತ್ತದೆ. ಮತ್ತು ರಾಜರು ಸಾವಿಗೆ ಭಯಪಡುವುದಿಲ್ಲ ಆದರೆ ತನ್ನ ಸಾವಿನ ನಂತರ ತನ್ನ ರಾಜ್ಯದ ಪರಿಸ್ಥಿತಿ ಏನಾಗುವುದೋ ಎಂದು ಭಯಪಡುತ್ತಾರೆ. ಅಷ್ಟೇ ರಾಜನನ್ನು ಕಾಪಾಡಿದ ನಂತರ ನಿನಗೆ ನಿನ್ನ ಅಹಂ ನಿನ್ನನ್ನು ಹಾಗೆ ಪ್ರಶ್ನೆ ಕೇಳುವಂತೆ ಮಾಡಿತು, ನಿನಗೆ ಒಂದು ಪಾಠ ಕಲಿಸಲು ನಾನು ಹೀಗೆ ಮಾಡಿದೆ ಅಷ್ಟೇ ನಿನ್ನನ್ನು ಶಿಕ್ಷಿಸುವುದಿಲ್ಲ ಸನ್ಮಾನಿಸುತ್ತೇನೆ ನನ್ನ ಪ್ರಾಣ ಕಾಪಾಡಿದ್ದೀಯ ಎಂದಾಗ ಜವರ ತನ್ನ ತಪ್ಪನ್ನು ತಿಳಿದು, ನಂತರ ಸನ್ಮಾನಗೊಂಡನು.
ನೀತಿ: ಕೆಲವು ಸಮಯದಲ್ಲಿ ನಮ್ಮ ಉದ್ಧಟತನ ನಮ್ಮ ಸರಹದ್ದು ಮೀರಿದಾಗ ಇಂತಹ ದುರವಸ್ಥೆ ಅನುಭವಿಸಬೇಕಾಗುತ್ತದೆ.

ಸಂಪಾದಕರ ಮಾತು
‘ಉದ್ಧಟತನ ಕಲಿಸಿದ ಪಾಠ’ ಎಂಬ ಈ ದಿನದ ಕಥೆ ಅಧಿಕಾರ, ಅಹಂ ಮತ್ತು ಮಾನವೀಯತೆಯ ನಡುವಿನ ಸೂಕ್ಷ್ಮ ಸಮತೋಲನವನ್ನು ಸರಳವಾದ ಕಥನದಲ್ಲಿ ಮನಮುಟ್ಟುವಂತೆ ಹೇಳುತ್ತದೆ. ಸಂಕಷ್ಟದ ಕ್ಷಣದಲ್ಲಿ ವಿವೇಕದಿಂದ ನಡೆದುಕೊಂಡ ಜವರನ ಧೈರ್ಯ ಶ್ಲಾಘನೀಯವಾದರೂ, ಅದೇ ಧೈರ್ಯ ಅಹಂಕಾರವಾಗಿ ಮಾರ್ಪಟ್ಟಾಗ ಹೇಗೆ ಅಪಾಯದ ಅಂಚಿಗೆ ಕೊಂಡೊಯ್ಯುತ್ತದೆ ಎಂಬ ಸಂದೇಶ ಕಥೆಯ ಮರ್ಮ.
ರಾಜನ ಪಾತ್ರದ ಮೂಲಕ ಲೇಖಕರು ಮತ್ತೊಂದು ಮಹತ್ವದ ಸತ್ಯವನ್ನು ತೆರೆದಿಡುತ್ತಾರೆ—ಪದವಿ ಎತ್ತರವಾದರೂ ಭಯ, ನೋವು, ಅಸ್ಥಿರತೆ ಮಾನವನ ಸಹಜ ಗುಣಗಳು. ನಿರಾಯುಧನಾಗಿದ್ದ ಕ್ಷಣದಲ್ಲಿ ರಾಜ ಅನುಭವಿಸಿದ ಭಾವನೆ ಮತ್ತು ನಂತರ ಜವರನಿಗೆ ನೀಡಿದ ಪಾಠ, ‘ಅನುಭವವೇ ಶ್ರೇಷ್ಠ ಗುರು’ ಎಂಬುದನ್ನು ನೆನಪಿಸುತ್ತದೆ.
ಇಂದಿನ ಸಮಾಜದಲ್ಲಿ ಮಾತು ಮತ್ತು ವರ್ತನೆಯ ಗಡಿ ಮೀರಿದರೆ ಅದರ ಪರಿಣಾಮ ಎಷ್ಟು ಗಂಭೀರವಾಗಬಹುದು ಎಂಬ ಎಚ್ಚರಿಕೆಯನ್ನು ಈ ಕಥೆ ನೀಡುತ್ತದೆ. ಸಮಯಪ್ರಜ್ಞೆ, ವಿನಯ ಮತ್ತು ಮಿತಿಮೀರದ ಧೈರ್ಯ—ಇವೇ ವ್ಯಕ್ತಿಯನ್ನು ಗೌರವಕ್ಕೆ ತರುತ್ತವೆ ಎಂಬ ಸಂದೇಶ ಓದುಗರಿಗೆ ಸ್ಪಷ್ಟವಾಗಿ ತಲುಪುತ್ತದೆ. ನೀತಿ ಮಾತನ್ನು ಉಪದೇಶವಾಗಿ ಅಲ್ಲ, ಅನುಭವವಾಗಿ ಕಟ್ಟಿಕೊಟ್ಟಿರುವ ಲೇಖಕ ವೇಣುಗೋಪಾಲ್ ಅವರಿಗೆ ಅಭಿನಂದನೆಗಳು. ಈ ಕಥೆ ಓದುಗರನ್ನು ಸ್ವಯಂಮೌಲ್ಯಮಾಪನಕ್ಕೆ ಪ್ರೇರೇಪಿಸುವಲ್ಲಿ ಯಶಸ್ವಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


