ಬಹಳ ಹಿಂದೆ ಶ್ರೀಧರ್ಮ ಎಂಬ ವರ್ತಕನಿದ್ದ, ಈತ ಸ್ವತಃ ಪಂಡಿತ. ದೇವರಲ್ಲಿ ಅಪಾರ ನಂಬಿಕೆ ಇದರಂತೆ ಪೂಜೆ–ಪುನಸ್ಕಾರ, ಹೋಮ–ಹವನ, ಹಬ್ಬ–ಹರಿದಿನಗಳನ್ನು ಚಾಚೂ ತಪ್ಪದೇ ಆಚರಿಸುತ್ತಿದ್ದ. ಅದರಂತೆ ಮೃತ ಹೊಂದಿದ ತಮ್ಮ ಹಿರಿಯರ ಕರ್ಮಗಳನ್ನು ತಪ್ಪದೇ ನೆರವೇರಿಸಿಕೊಂಡು ಬರುತ್ತಿದ್ದ. ಹೀಗಿರುವಾಗ ಆತನಿಗೂ ಮರಣಶೈಯ ಅವಸ್ಥೆ ಬಂದಿತು. ಆಗ ಒಂದು ದಿನ ತನ್ನ ಮಗ ಸುಧರ್ಮನನ್ನ ಹತ್ತಿರಕ್ಕೆ ಕರೆದು ನೋಡು ನಾನು ಇದುವರೆಗೂ ಯಾವುದೇ ಧಾರ್ಮಿಕ ಕಾರ್ಯ ಅಥವಾ ಕರ್ಮ ಬಿಡದೆ ಅತ್ಯಂತ ಶ್ರದ್ಧೆಯಿಂದ ನೆರವೇರಿಸಿಕೊಂಡು ಬಂದಿದ್ದೇನೆ ನೀನು ನನ್ನ ಮರಣದ ನಂತರ ಮುಂದುವರೆಸಿಕೊಂಡು ಹೋಗುವೆಯಾ ಇದರಿಂದ ನಿನಗೂ ನಿನ್ನ ಮೃತ ಹಿರಿಯರಿಗೂ ತುಂಬಾ ಒಳ್ಳೆಯದು ಆಗುತ್ತದೆ ಎಂದಾಗ, ಮಗ ಸುಧರ್ಮ ಇಂತಹ ಆಚರಣೆಗಳಲ್ಲಿ ಸ್ವಲ್ಪವೂ ನಂಬಿಕೆ ಇಲ್ಲದಿದ್ದರೂ, ಮೃತ ಅವಸ್ಥೆಯಲ್ಲಿರುವ ತನ್ನ ತಂದೆ ಯಾವುದೇ ಮಾನಸಿಕ ನೋವು ಉಂಟಾಗಬಾರದೆಂದು ಖಂಡಿತ ಪಿತಾಶ್ರೀ ನಾನು ನೆರವೇರಿಸಕೊಂಡು ಹೋಗುತ್ತೇನೆ ಎಂದಾಗ ಮಗನ ಮಾತು ಕೇಳಿ ಅತ್ಯಂತ ಆನಂದದಿಂದ ಕಣ್ತುಂಬಿ ನೋಡಿ ಪ್ರಾಣ ಬಿಟ್ಟನು. ಆದರೆ ತಂದೆಯ ಮರಣದ ನಂತರ ತನ್ನ ತಂದೆ ಹೇಳಿದ ಯಾವುದೇ ಆಚರಣೆಗಳಲ್ಲಿ ನಂಬಿಕೆ ಇರದ ಸುಧರ್ಮ ತನ್ನ ತಂದೆ ನಡೆಸುತ್ತಿದ್ದ ವರ್ತಕ ವೃತ್ತಿಯನ್ನು ಮುಂದುವರೆಸಿಕೊಂಡು ಕೇವಲ ಲಾಭ ಎಣಿಸುವುದರಲ್ಲಿ ಮಗ್ನನಾದನು.
ಹೀಗಿರುವಾಗ ಇದನ್ನು ಗಮನಿಸಿದ ಇವನ ಕುಟುಂಬದ ಕೆಲ ಹಿರಿಯರು ಇವನಲ್ಲಿಗೆ ಬಂದು ನೋಡು ಸುಧರ್ಮ ಹೀಗೆಲ್ಲಾ ಅಪನಂಬಿಕೆಯಿಂದ ನಡೆದುಕೊಳ್ಳಬಾರದು ತಂದೆಯವರಿಗೆ ಮಾತು ಕೊಟ್ಟಿರುವಂತೆ ನೀನು ಧಾರ್ಮಿಕ ಕಾರ್ಯ ಎಲ್ಲವನ್ನೂ ನೆರವೇರಿಸಿಕೊಂಡು ಹೋಗು ಇದರಿಂದ ನಿನಗೆ ಒಳ್ಳೆಯದು ಆಗುತ್ತದೆ ಮತ್ತು ನಿನ್ನ ತಂದೆ ಮತ್ತು ಹಿರಿಯರಿಗೆ ಸ್ವರ್ಗಪ್ರಾಪ್ತಿಯಾಗುತ್ತದೆ ಎಂದಾಗ ಸುಧರ್ಮ ಎಲ್ಲರೂ ಮೂಢನಂಬಿಕೆಯಂತೆ ಮಾತನಾಡಬೇಡಿ, ನಾನು ಪ್ರತಿವರ್ಷ ಎಲ್ಲ ದೇವಸ್ಥಾನಗಳಿಗೂ ಹೋಗಿಬರುತ್ತಿದ್ದೇನೆ ಎಲ್ಲರಿಗೂ ಒಳ್ಳೆಯದು ಕೇಳಿಕೊಳ್ಳುತ್ತಿದ್ದೇನೆ ದೇವರಿಗಿಂತ ಎಲ್ಲರೂ ದೊಡ್ಡವರೇ ಎಂದಾಗ, ಹಿರಿಯರು ಇದು ಸರಿ ಇದ್ದರೂ ವೈದಿಕ ಕಾರ್ಯ ಬಿಡಬಾರದಪ್ಪ ಆತ್ಮರೂಪಿ ಹಿರಿಯರ ನೋವಿಗೆ ಕಾರಣರಾಗಬಾರದು ಅವರಿಗೂ ಹಸಿವು ಆಗುತ್ತಿರುತ್ತದೆ, ನೀನು ಮಾಡುವ ವೈದಿಕ ಕರ್ಮದಿಂದ ಅವರ ಹಸಿವು ನೀಗುತ್ತದೆ, ಮತ್ತು ಸ್ವರ್ಗ ಪ್ರಾಪ್ತಿಗೆ ದಾರಿಯಾಗುತ್ತದೆ ಎಂದಾಗ ಸಿಟ್ಟುಗೊಂಡ ಸುಧರ್ಮ ನನಗೆ ಯಾರೂ ಉಪದೇಶಕೊಡಲು ಬರಬೇಡಿ ಎಂದಾಗ ಇನ್ನು ಇವನಿಗೆ ಯಾರು ಏನೂ ಹೇಳಲಾರರು ಎಂದು ಇವನ ಹಣೆಯಲ್ಲಿ ಇದ್ದಂತೆ ಆಗುತ್ತದೆ ಎಂದುಕೊಂಡು ಎದ್ದು ಹೋದರು.
ಎರಡು ವರುಷಗಳಾದರೂ ಯಾವುದೇ ವೈದಿಕ ಕಾರ್ಯ ಮಾಡದ ಸುಧರ್ಮನ ಆತ್ಮರೂಪಿ ಶ್ರೀಧರ್ಮ ತನ್ನ ವೈದಿಕ ಕರ್ಮದ ದಿವಸ ತನ್ನ ಮಗನ ಮನಗೆ ಆತ್ಮರೂಪದಲ್ಲಿ ಬಂದು ನೋಡಿದಾಗ ಮಗ ಕೇವಲ ವರ್ತಕ ವೃತ್ತಿಯಲ್ಲಿ ತುಂಬ ಮಗ್ನನಾಗಿದ್ದ ಯಾವುದೇ ವೈದಿಕ ಕರ್ಮದ ಸೂಚನೆ ಅಲ್ಲಿ ಇರಲಿಲ್ಲ. ಇದರಿಂದ ತುಂಬ ಹಸಿವಿನಿಂದ ಕೂಡಿದ್ದ ಆತ್ಮಕ್ಕೆ ನಾನು ಏನಾದರೂ ಮಾಡಿ ಮಗನ ಮನೆಯಲ್ಲಿ ಊಟ ಮಾಡಿಕೊಂಡೇ ಹೋಗಬೇಕು ಎಂದು ಕೊಂಡು ಅಲ್ಲಿ ಬರುತ್ತಿದ್ದ ಒಬ್ಬ ಭಿಕ್ಷುಕನನ್ನು ನೋಡಿ ಇವನ ದೇಹದೊಳಗೆ ಸೇರಿಕೊಂಡು ಊಟ ಕೇಳಿದರೆ ಕಡೆ ಪಕ್ಷ ಮರುಗಿ ಊಟ ಹಾಕಬಹುದು ಎಂದುಕೊಂಡು ಭಿಕ್ಷುಕನ ದೇಹದೊಳಗೆ ಸೇರಿಕೊಂಡು ಇಂದು ನಿನ್ನ ತಂದೆಯ ವೈದಿಕ ಕರ್ಮ ಇದೆ ಎಂದು ಹೀಗಾದರೂ ನೆನಪಿಸುವ ಪ್ರಯತ್ನ ಮಾಡೋಣ ಎಂದುಕೊಂಡು ಸುಧರ್ಮನಿದ್ದ ಬಳಿಗೆ ಹೋಗಿ ಅಪ್ಪ ಮಗು ನನಗೆ ಊಟ ಹಾಕಪ್ಪ ತುಂಬ ಹಸಿವಾಗಿದೆ ಎಂದಾಗ ಸುಧರ್ಮ ಊಟ ಅವೆಲ್ಲ ಕೇಳಬೇಡ ತಗೋ ಬೇಕಾದರೆ 1 ರೂಪಾಯಿ ಎಂದಾಗ, 1 ರೂಪಾಯಿ ಕೊಡಲು ಬಂದ ಮಗನ ಮನಸ್ಥಿತಿ ನೋಡಿ ಇದೇಕೆ ನನ್ನ ಮಗ ನನಗೆ ಮಾತು ಕೊಟ್ಟಂತೆ ಇಲ್ಲವಲ್ಲ ಎಂದುಕೊಂಡು ಅವನ ದೇಹ ಬಿಟ್ಟು ನಂತರ ಅಲ್ಲಿ ಬರುತ್ತಿದ್ದ ಒಬ್ಬ ಪಂಡಿತನನ್ನ ನೋಡಿ ಕಡೆಪಕ್ಷ ಪಂಡಿತರಿಗೆ ಬೆಲೆಕೊಟ್ಟಿಯಾದರೂ ಊಟ ಕೊಡಿಸಬಹುದು ಎಂದು ಯೋಚಿಸಿ ಪಂಡಿತನ ದೇಹ ಸೇರಿಕೊಂಡ ಶ್ರೀಧರ್ಮನ ಆತ್ಮ ಸುಧರ್ಮನ ಬಳಿ ಹೋಗಿ ಮಗು ನನಗೆ ತುಂಬ ಹಸಿವಾಗಿ ಊಟ ಹಾಕುವೆಯಾ ಎಂದಾಗ ಸುಧರ್ಮ, ನೋಡಿ ಪಂಡಿತರೆ ನಾನು ವ್ಯಾಪಾರದಲ್ಲಿ ತುಂಬ ನಿರತನಾಗಿದ್ದೇನೆ ನನಗೆ ಅಷ್ಟೊಂದು ಸಮಯವಿಲ್ಲ ಬೇಕಾದರೆ 100 ರೂಪಾಯಿ ಕೊಡುತ್ತೇನೆ ನೀವೆ ಬೇಕಾದ ಊಟ ಮಾಡಿಕೊಂಡು ಹೋಗಬಹುದು ಎಂದು ಹೇಳಿ 100 ರೂಪಾಯಿ ಕೊಡಲು ಹೋದಾಗ ಶ್ರೀಧರ್ಮನ ಆತ್ಮ ತನ್ನ ಮಗ ಕೇವಲ ನಾನು ಸಾಯುವಾಗ ನನ್ನ ಮನ ಸಂತೋಷವಾಗಲೆಂದು ಹಾಗೆ ಮಾತು ಕೊಟ್ಟಿದ್ದಾನೆ ಅಷ್ಟೇ, ನನ್ನ ಯಾವುದೇ ಮಾತು ನೆರವೇರಿಸುತ್ತಿಲ್ಲ, ಇರಲಿ ಆಯಿತು ಇನ್ನೊಂದು ಪ್ರಯತ್ನ ಮಾಡೋಣ ಎಂದು ಕೊಂಡು ಈಗ ವ್ಯವಹಾರದಲ್ಲಿ ನಿರನಾಗಿದ್ದಾನೆ, ಮನೆಗೆ ಬಂದ ನಂತರವಾದರು ನನಗೆ ಊಟ ಹಾಕಬಹುದು ಎಂದು ಯೋಚಿಸಿ ನಂತರ ತನ್ನ ಮಗ ಮನೆಗೆ ಬರುವವರೆಗೆ ಕಾದು ನಂತರ ಸುಧರ್ಮ ಮನೆಗೆ ಬಂದ ನಂತರ ಅಲ್ಲಿ ಬರುತ್ತಿದ್ದ ಒಂದು ನಾಯಿಯ ದೇಹದೊಳಗೆ ಸೇರಿಕೊಂಡು ಪ್ರಾಣಿಗಾದರೂ ದಯೆ ತೋರಿ ಊಟ ಹಾಕುವ ಕಾರ್ಯ ಮಾಡಬಹುದು ಎಂದು ಯೋಚಿಸಿ ನಾಯಿಯ ಶರೀರ ಸೇರಿಕೊಂಡು ಸುಧರ್ಮನ ಮನೆಯ ಬಾಗಿಲಿಗೆ ಬಂದು ಸುಧರ್ಮನ ಪಂಚೆ ಹಿಡಿದು ಒಮ್ಮೆ ಎಳೆಯಿತು ಇದನ್ನು ಹಿಂದೆ ತಿರುಗಿ ನೋಡಿದ ಸುಧರ್ಮ ಏ ಹೋಗು ಈಗತಾನೆ ವ್ಯಾಪಾರ ಮುಗಿಸಿ ಹೊಟ್ಡೆ ಹಸಿದು ನಾನೇ ಸಾಯುತ್ತಿದ್ದೇನೆ ನಿನಗೆ ಎಲ್ಲಿಂದ ಊಟ ಹಾಕಲಿ ಎಂದು ಪಂಚೆ ಒದರಿ ಬಾಗಿಲುಹಾಕಿಕೊಂಡು ಒಳಗೆ ಬಂದನು. ಇಷ್ಟೆಲ್ಲಾ ಸೂಚನೆ ಕೊಟ್ಟರೂ ಹಸಿದಿರುವ ತನ್ನ ತಂದೆಗೆ ಊಟ ಹಾಕದೆ ಕೇವಲ ತನ್ನ ಹೊಟ್ಟೆ ಬಗ್ಗೆ ಮಾತ್ರ ಯೋಚಿಸುತ್ತಿದ್ದಾನೆ, ಇನ್ನು ಪ್ರಯತ್ನ ಪಟ್ಟು ಪ್ರಯೋಜನವಿಲ್ಲ ಎಂದು ಅಸಂತೃಷ್ಟಗೊಂಡು ತನ್ನ ಮಗನಿಗೆ ಇಂದು ತನ್ನ ತಂದೆಯವರ ಕಾರ್ಯ ಇರುವುದರ ಬಗ್ಗೆ ನೆನಪಿಗೆ ಬರಲಿಲ್ಲವಲ್ಲ ಎಂದು ನೊಂದ ಶ್ರೀಧರ್ಮನ ಆತ್ಮ ನಿನಗೆ ಇಲ್ಲಿಂದ ನಿನ್ನ ಎಲ್ಲ ಕೆಲಸ ಕಾರ್ಯ ಗಳಲ್ಲೂ ಹಿನ್ನಡೆ ಉಂಟಾಗಲಿ ಎಂದ ಶಾಪವಿತ್ತು ಅಲ್ಲಿಂದ ಹೊರಟು ಹೋಯಿತು.
ಪರಿಕಲ್ಪನೆ: ವೇಣುಗೋಪಾಲ್
ಸಂಪಾದಕರ ನುಡಿ
“ಹಿರಿಯರ ಶಾಪ” ಕಥೆ ನಮ್ಮ ಪಾರಂಪರಿಕ ನಂಬಿಕೆಗಳ ಆಳವನ್ನು ತೋರುವ ಮನಮುಟ್ಟುವ ಕಹಾನಿ. ಪಿತೃಕರ್ತವ್ಯವನ್ನು ಕೇವಲ ಒಂದು ಧಾರ್ಮಿಕ ವಿಧಿ–ವಿಧಾನವೆಂದುಕೊಳ್ಳದೆ, ಅದು ಹಿರಿಯರಿಗಿರುವ ಕೃತಜ್ಞತೆ, ಪಿತೃಗಳಿಗೆ ಸಲ್ಲಿಸುವ ಗೌರವ, ಹಾಗೂ ನಮ್ಮ ಕುಟುಂಬ-ಸಮಾಜ ಜೀವನದಲ್ಲಿ ಆಧ್ಯಾತ್ಮಿಕ ಸಮತೋಲನವನ್ನು ಕಾಪಾಡುವ ಸಾಧನ ಎಂಬುದನ್ನು ಈ ಕಥೆ ಮನದಟ್ಟಾಗಿಸುತ್ತದೆ.
ಸುಧರ್ಮನ ಪಾತ್ರದ ಮೂಲಕ ಇಂದಿನ ಪೀಳಿಗೆಯಲ್ಲಿರುವ ಅಹಂಕಾರ, ಧರ್ಮ–ಸಂಸ್ಕಾರಗಳ ಮೇಲಿನ ಅವಿಶ್ವಾಸ ಮತ್ತು ಲಾಭಾಸಕ್ತಿ ಎಷ್ಟು ದೊಡ್ಡ ಅನರ್ಥಕ್ಕೆ ಕಾರಣವಾಗಬಹುದು ಎಂಬುದನ್ನು ಲೇಖಕನು ಚೆನ್ನಾಗಿ ತೋರಿಸಿದ್ದಾರೆ. ಹಿರಿಯರಿಗೆ ನೀಡಿದ ಮಾತು ಕೇವಲ ಮಾತಿನ ಮಟ್ಟದಲ್ಲೇ ಉಳಿದುಕೊಳ್ಳಬಾರದು; ಅದನ್ನು ಆಚರಣೆಯ ಮೂಲಕ ಜೀವಂತವಾಗಿಡುವುದು ನಮ್ಮ ಕರ್ತವ್ಯ.
ಈ ಕಥೆ ಒಂದು ಎಚ್ಚರಿಕೆಯೂ ಹೌದು -– ಧನ, ವ್ಯಾಪಾರ, ಅಧಿಕಾರ, ಸ್ಥಾನಮಾನಗಳೆಲ್ಲಾ ತಾತ್ಕಾಲಿಕ. ಆದರೆ ಪಿತೃಗಳ ಆಶೀರ್ವಾದವು ಶಾಶ್ವತವಾದ ಹಿತವನ್ನು ನೀಡಬಲ್ಲದು. ಅದನ್ನು ನಿರ್ಲಕ್ಷಿಸಿದಾಗ ಅದು ಶಾಪವಾಗಿ ಜೀವನದ ದಾರಿಯನ್ನು ಕತ್ತಲೆಮಾಡುತ್ತದೆ. ವೇಣುಗೋಪಾಲ್ ಅವರ ಪರಿಕಲ್ಪನೆ ನಮ್ಮ ಓದುಗರಿಗೆ ಧಾರ್ಮಿಕ ಆಚರಣೆಗಳ ನಿಜವಾದ ಅರ್ಥವನ್ನು ಪುನಃ ನೆನಪಿಸುವಂತಿದೆ.
— ಸಂಪಾದಕರು