ಜನಸಾಮಾನ್ಯರು ಮತ್ತು ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆ ಮಾಡಲು ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ನಗರದ 172 ಇಂದಿರಾ ಕ್ಯಾಂಟೀನ್ ಗಳಲ್ಲಿರುವ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ಸಮಿತಿ ಅಧ್ಯಕ್ಷರು ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಿಗೆ ಸೂಚಿಸಿದ್ದಾರೆ. ತಮ್ಮ ವಲಯದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಪ್ರದೇಶಗಳನ್ನು ಗುರುತಿಸುವಂತೆ ವಲಯಗಳ ಆಯುಕ್ತರಿಗೆ ನಿರ್ದೇಶಿಸಿದ್ದಾರೆ.
ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ 100 ಶೌಚಾಲಯ ನಿರ್ಮಿಸಲು ಶೀಘ್ರ ಟೆಂಡರ್ ಆಹ್ವಾನಿಸಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ. ಅದಕ್ಕಾಗಿ 25 ಕೋಟಿ ರೂಪಾಯಿ ಅನುದಾನವನ್ನು 2024-25ನೇ ಬಜೆಟ್‌ನಲ್ಲಿ ಮೀಸಲಿಡಲು ಪ್ರಸ್ತಾವಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ 246 ಸಾರ್ವಜನಿಕ ಶೌಚಾಲಯ ನಿರ್ಮಿಸಲು ಈಗಾಗಲೇ ಟೆಂಡರ್ ಅಧಿಸೂಚನೆ ಹೊರಡಿಸಲಾಗಿದೆ. 46 ಒಡಿಎಫ್ ನಿರ್ಮಾಣಕ್ಕೆ ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಸಾರ್ವಜನಿಕ ಶೌಚಾಲಯ ಕೊರತೆಯಿರುವ ವಿಚಾರವಾಗಿ ಲೆಟ್ಸ್ ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು, ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.


