ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ತೋವಿನಕೆರೆ ಗ್ರಾಮದ ವಾಸಿಯಾದ ಟಿ.ಕೆ.ಮೊಹಮ್ಮದ್ ಅದೇ ಗ್ರಾಮದ ಮಂಜಮ್ಮ ಎಂಬುವವರ ಹೆಸರಿನಲ್ಲಿದ್ದ ಮನೆ ಮತ್ತು ಖಾಲಿ ನಿವೇಶನವನ್ನು ಕ್ರಯಕ್ಕೆ ಖರೀದಿ ಮಾಡಿದ್ದು. ಕೊರಟಗೆರೆ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ದಿನಾಂಕ:01/08/2025 ರಂದು ನೋಂದಣಿಯಾಗಿರುತ್ತದೆ. ಕ್ರಯ ಪತ್ರದಂತೆ ಸದರಿ ಮನೆ ಮತ್ತು ಖಾಲಿ ನಿವೇಶನದ ಖಾತೆಯನ್ನು ಮಂಜಮ್ಮ ರವರ ಹೆಸರಿನಿಂದ ತನ್ನ ಹೆಸರಿಗೆ ಬದಲಾವಣೆ ಮಾಡಿಕೊಡುವಂತೆ ತೋವಿನಕೆರೆ ಗ್ರಾಮ ಪಂಚಾಯಿತಿಗೆ ದಿನಾಂಕ:12/08/2025 ರಂದು ಟಿ.ಕೆ.ಮೊಹಮ್ಮದ್ ರವರು ಅರ್ಜಿ ಸಲ್ಲಿಸಿರುತ್ತಾರೆ.
ಅರ್ಜಿ ಸಲ್ಲಿಸಿ ಸುಮಾರು ಎರಡು ತಿಂಗಳು ಕಳೆಯುತ್ತಾ ಬಂದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಖಾತೆ ಬದಲಾವಣೆ ಮಾಡಿಕೊಡದ ಕಾರಣ ದೂರುದಾರ ಟಿ.ಕೆ. ಮೊಹಮ್ಮದ್ ರವರು ದಿನಾಂಕ: 09/10/2025 ರಂದು ತೋವಿನಕರೆ ಗ್ರಾಮ ಪಂಚಾಯಿತಿ ಕಛೇರಿಗೆ ಭೇಟಿ ನೀಡಿ, ಬಿಲ್ ಕಲೆಕ್ಟರ್ ಮಾರುತಿ ರವರನ್ನ ಸಂಪರ್ಕಿಸಿದಾಗ, ಮಾರುತಿರವರು ಖಾತೆ ಬದಲಾವಣೆ ಮಾಡಿಕೊಡಲು 10,800 ರೂ. ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.
ತದನಂತರ ದಿನಾಂಕ:14/10/2025 ರಂದು ದೂರುದಾರ ಟಿ.ಕೆ.ಮೊಹಮ್ಮದ್ ಮತ್ತೊಮ್ಮೆ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ಹಣ ಕಡಿಮೆ ಮಾಡಿಕೊಳ್ಳುವಂತೆ ಕೇಳಿದಾಗ ಬಿಲ್ ಕಲೆಕ್ಟರ್ ಮಾರುತಿ ಮತ್ತು ಕಾರ್ಯದರ್ಶಿ ಸುಮಾರವರು 8,000 ರೂ. ನೀಡುವಂತೆ ಬೇಡಿಕೆ ಇಟ್ಟಿರುತ್ತಾರೆ.
ದೂರುದಾರ ಟಿ.ಕೆ.ಮೊಹಮ್ಮದ್ ರವರಿಗೆ ಲಂಚ ನೀಡಲು ಇಷ್ಟವಿಲ್ಲದೇ, ದಿನಾಂಕ: 15/10/2025 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿರುತ್ತಾರೆ.
ಪೊಲೀಸ್ ನಿರೀಕ್ಷಕರಾದ ರಾಜು ಟಿ.ರವರು ಮೊ.ನಂ:08/2025 ಕಲಂ–7(a) ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ-1988 (ತಿದ್ದುಪಡಿ–2018) ರಂತೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ:16/10/2025 ರಂದು ಟ್ರ್ಯಾಪ್ ಕಾರ್ಯಾಚರಣೆ ವೇಳೆ ತೋವಿನಕೆರೆ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಬೆಳ್ಳಿಗ್ಗೆ 10.45 ಗಂಟೆಗೆ 8,000 ರೂ. ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಮಾರುತಿ ಮತ್ತು ಕಾರ್ಯದರ್ಶಿ ಸುಮ ರವರನ್ನು ತನಿಖಾಧಿಕಾರಿ ರಾಜು.ಟಿ, ಪೊಲೀಸ್ ನಿರೀಕ್ಷಕರು ರವರ ನೇತೃತ್ವದ ತಂಡ ವಶಕ್ಕೆ ಪಡೆದು, ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ತುಮಕೂರು ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀನಾರಾಯಣ.ಎ.ವಿ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರಾದ ಡಾ.ಸಂತೋಷ್ ಕೆ.ಎಂ.ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರುಗಳಾದ ರಾಜು.ಟಿ, ಬಿ.ಮೊಮ್ಮದ್ ಸಲೀಂ, ಕೆ.ಸುರೇಶ ಮತ್ತು ಶಿವರುದ್ರಪ್ಪ ಮೇಟಿ ಮತ್ತು ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು, ಲಂಚ ಸ್ವೀಕರಿಸಿದ್ದ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC