ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ ಚಿತ್ರ ಹಿಂಸೆ ನೀಡಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ವಿರುದ್ಧ ಬಿರ್ಭುಮ್ ಜಿಲ್ಲೆಯ ಬೋಲ್ಪುರ್ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್‌ಐಆರ್ ದಾಖಲಿಸಲಾಗಿದೆ.
ಬಹಿರಿ ಪಂಚಚೋವಾ ಗ್ರಾಮ ಪಂಚಾಯತ್ ಪ್ರದೇಶದ ಕರೀಂಪುರದ ನಿವಾಸಿಯಾದ ಫಿರೋಜ್ ಖಾನ್, ವಿವಾಹಿತ ಮಹಿಳೆಯನ್ನು ಗನ್ ತೋರಿಸಿ ಬಲವಂತವಾಗಿ ಅಪಹರಿಸಿ ದನದ ಕೊಟ್ಟಿಗೆಗೆ ಕರೆದೊಯ್ದು, ಅಲ್ಲಿ ಆಕೆಯ ಕೈ ಮತ್ತು ಕಾಲುಗಳನ್ನು ಕಟ್ಟಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೇ ಆರೋಪಿಯು ಸಂತ್ರಸ್ತೆಯ ಜನನಾಂಗಕ್ಕೆ ಗನ್ ತೂರಿಸುವ ಮೂಲಕ ಚಿತ್ರಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಹಲ್ಲೆಯ ಸಮಯದಲ್ಲಿ ಆತ ಸಂತ್ರಸ್ತೆಯ ಪೋಟೊಗಳನ್ನು ಸಹ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ. ನಂತರ ಅವಳ ನಾಲ್ಕು ವರ್ಷದ ಮಗ, ತನ್ನ ತಾಯಿಯನ್ನು ಹುಡುಕುತ್ತಾ ದನದ ಕೊಟ್ಟಿಗೆಗೆ ಬಂದಾಗ ತಾಯಿಯನ್ನು ಆ ಸ್ಥಿತಿಯಲ್ಲಿ ನೋಡಿದ ಮಗು ಅಳಲು ಪ್ರಾರಂಭಿಸಿತು. ಆಗ ಆರೋಪಿ ಟಿಎಂಸಿ ಕಾರ್ಯಕರ್ತ ಮಗುವನ್ನು ಬೆದರಿಸಿ ಗೋಣಿ ಚೀಲದಲ್ಲಿ ಕಟ್ಟಿಹಾಕಿದ್ದಾನೆ ಎಂಬುದಾಗಿ ವರದಿಯಾಗಿದೆ.
ಆರೋಪಿ ಹಲವಾರು ದಿನಗಳಿಂದ ಕಿರುಕುಳ ನೀಡುತ್ತಿದ್ದ. ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಪೀಡಿಸುತ್ತಿದ್ದ. ಅಲ್ಲದೇ ಆಕೆಗೆ ಮುಂಗಡ ಹಣವನ್ನು ನೀಡಿದ್ದ. ಆಕೆ ತಿರಸ್ಕರಿಸಿದಾಗ ಗನ್ ತೋರಿಸಿ ಬಲವಂತವಾಗಿ ಅತ್ಯಾಚಾರ ನಡೆಸಿದ್ದ. ಅಲ್ಲದೇ ಆಕೆಯ ಮಗನನ್ನೂ ಕೊಲ್ಲಲು ಯತ್ನಿಸಿದ್ದ ಎಂದು ಮಹಿಳೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಸಂತ್ರಸ್ತೆಯನ್ನು ಬೋಲ್ಪುರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಮರ್ಯಾದೆಗೆ ಹೆದರಿ ಸಂತ್ರಸ್ತೆ ಹಲವಾರು ದಿನಗಳವರೆಗೆ ಘಟನೆಯನ್ನು ವರದಿ ಮಾಡಲು ಹಿಂಜರಿಯುತ್ತಿದ್ದಳು. ಅಂತಿಮವಾಗಿ, ಆಕೆಯ ಪತಿ ಆರೋಪಿಗಳ ವಿರುದ್ಧ ದೂರು ದಾಖಲಿಸಲು ಹೇಳಿದ್ದಾರೆ. ಹಾಗಾಗಿ ಸಂತ್ರಸ್ತೆ ಆಕೆಯ ಪತಿಯೊಂದಿಗೆ ನೀಡಿದ ದೂರಿನ ಆಧಾರದ ಮೇಲೆ ಬೋಲ್ಪುರ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q