ಚಿತ್ರದುರ್ಗ: ಭಾರತ ಮತ್ತು ಪಾಕ್ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಏನು ಹೆಡ್ ಮಾಸ್ಟ್ರಾ? ನಾವೇನು ಸ್ಕೂಲ್ ಮಕ್ಕಳಾ? ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು. ಪಾಕ್ ಹಾಗೂ ಭಾರತ ನಡುವಿನ ಕದನ ವಿರಾಮವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಸಾರ್ವಜನಿಕ ವಲಯದಲ್ಲೊಂದು ಪ್ರಶ್ನೆ ತಲೆಯೆತ್ತಿದ್ದು, ಮೊದಲು ನಾವು ಎಲ್ಲಾ ವಿಷಯವನ್ನು ಅವಲೋಕಿಸಿದ ಬಳಿಕ ಸಂಘರ್ಷ ಮಾಡಬೇಕಿತ್ತು. ಆದರೆ ಸಂಘರ್ಷ ಆರಂಭವಾದ ಮೇಲೆ ಅವರಿಗೆ ಪಾಠ ಕಲಿಸಬೇಕಾದ್ದು ನಮ್ಮ ಗುರಿಯಾಗಬೇಕಿತ್ತು. ದಿಢೀರ್ ಅಂತ ಅಮೆರಿಕ ಹೇಳಿದಾಕ್ಷಣ ಕದನ ವಿರಾಮ ಘೋಷಣೆ ಕಂಡಾಗ, ಪಾಕ್ ಗೆ ನಾವು ನಿಜವಾಗಿಯೂ ಪಾಠ ಕಲಿಸಿದ್ದೀವಾ ಎಂಬ ಪ್ರಶ್ನೆ ನನಗೆ ಮೂಡುತ್ತಿದೆ ಎಂದರು.
ಈ ಕದನ ವಿರಾಮದ ಬಳಿಕ ಭಾರತಕ್ಕೆ ನಾವು ಪಾಠ ಕಲಿಸಿದ್ದೇವೆ ಎಂದು ಅವರು ಹೇಳಿಕೊಳ್ಳುತ್ತಾರೆ. ಆದರೆ ಪಾಕ್ಗೆ ಪಾಠ ಕಲಿಸಿದ್ದೀವಿ ಎಂದು ನಾವು ಹೇಳಿಕೊಳ್ಳುತ್ತಿದ್ದೇವೆ. ಒಮ್ಮೆ ಸಂಘರ್ಷ ಆರಂಭವಾದ ಮೇಲೆ ನಮ್ಮ ಆಂತರಿಕ ವಿಚಾರದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಬೆರಳು ತೋರಿಸುವ ದುಸ್ಸಾಹಸಕ್ಕೆ ಕೈ ಹಾಕದಂತೆ ಪಾಠ ಕಲಿಸಬೇಕಿತ್ತು ಎಂದು ಹೇಳಿದರು.
ಈ ಹಿಂದೆ 1971ರಲ್ಲಿ ಕೂಡ ಈ ಪಾಕಿಸ್ತಾನ ಇದೇ ರೀತಿ ಭಾರತಕ್ಕೆ ತೊಂದರೆ ನೀಡಿದ್ದು, ಆಗಿನ ಪ್ರಧಾನಿ ಇಂದಿರಾ ಗಾಂಧಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಿದ್ದರು. ಪಾಕಿಸ್ತಾನವನ್ನೇ ಇಬ್ಭಾಗ ಮಾಡಿದ್ದು, ಸಾವಿರಾರು ಜನ ಸೈನಿಕರು ನಮಗೆ ಶರಣಾಗಿದ್ದರು. ಆಗ ಪಾಕಿಸ್ತಾನವೇ ನಾವು ಸೋತಿದ್ದೇವೆ ಎನ್ನುವ ಮಟ್ಟಕ್ಕೆ ಅವರ ವಿರುದ್ಧ ಇಂದಿರಾ ಗಾಂಧಿ ಯುದ್ಧ ಮಾಡಿದ್ದರು ಎಂದು ಅಂದಿನ ಪರಿಸ್ಥಿತಿಯನ್ನು ಸ್ಮರಿಸಿದರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————