ತುಮಕೂರು: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ನಿರುದ್ಯೋಗಿ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಸ್ವಯಂ ಉದ್ಯೋಗಗಳಲ್ಲಿ ತೊಡಗಿಕೊಳ್ಳಲು ಅನುಕೂಲವಾಗುವಂತೆ ಉದ್ಯೋಗಿನಿ, ಧನಶ್ರೀ, ಚೇತನ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳಡಿ ಆರ್ಥಿಕ ನೆರವು ನೀಡಲು ಅರ್ಹರಿಂದ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಉದ್ಯೋಗಿನಿ ಯೋಜನೆಯಡಿ 18-55 ವಯೋಮಿತಿಯೊಳಗಿರುವ ಆರ್ಥಿಕವಾಗಿ ಹಿಂದುಳಿದ ಮತ್ತು ಸಾಮಾನ್ಯ ಮಹಿಳೆಯರು ಯಾವುದಾದರೂ ಲಾಭದಾಯಕ ಚಟುವಟಿಕೆಯಲ್ಲಿ ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಬ್ಯಾಂಕಿನಿಂದ ಗರಿಷ್ಟ 3 ಲಕ್ಷ ರೂ.ಗಳವರೆಗೆ ಸಾಲ ನೀಡಲಾಗುವುದು. ಸಾಮಾನ್ಯ ವರ್ಗದ ಮಹಿಳೆಯರು, ವಿಧವೆ, ಅಂಗವಿಕಲರು ಹಾಗೂ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಗರಿಷ್ಠ 90,000 ರೂ. ಅಥವಾ ಶೇ.30ರಷ್ಟು ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಗರಿಷ್ಠ 1,50,000 ರೂ. ಅಥವಾ ಶೇ.50ರಷ್ಟು ಸಹಾಯಧನವನ್ನು ನೀಡಲಾಗುವುದು.
ಧನಶ್ರೀ, ಚೇತನ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳಡಿ 18–60 ವಯೋಮಿತಿಯೊಳಗಿರುವ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಯಾವುದಾದರೂ ಲಾಭದಾಯಕ ಚಟುವಟಿಕೆಯಲ್ಲಿ ಸ್ವಂತ ಉದ್ಯೋಗವನ್ನು ಕೈಗೊಳ್ಳಲು 30,000 ರೂ. ಸಹಾಯಧನ ಸೌಲಭ್ಯ ಒದಗಿಸಲಾಗುವುದು. ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವವರು ಸಂಸ್ಥೆಯಲ್ಲಿ ನೋಂದಣಿಯಾಗಿರಬೇಕು.
ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 2,00,000 ರೂ. ಹಾಗೂ ಸಾಮಾನ್ಯ ಮಹಿಳೆಯರಿಗೆ 1,50,000 ರೂ.ಗಳಿಗಿಂತ ಮೀರದ ವಾರ್ಷಿಕ ಆದಾಯವನ್ನು ಮಿತಿಗೊಳಿಸಲಾಗಿದೆ.
ಅರ್ಜಿದಾರರು ತಮ ಅರ್ಜಿಯೊಂದಿಗೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ಬಿ.ಪಿ.ಎಲ್. ಕಾರ್ಡ್, ವಾಸಸ್ಥಳ ದೃಢೀಕರಣ ಪತ್ರ, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ ಲಗತ್ತಿಸಬೇಕು. ವಿಧವೆ, ಅಂಗವಿಕಲರು, ಸಂಕಷ್ಟಗೊಳಗಾದ ಮಹಿಳೆಯರು ಪ್ರಮಾಣ ಪತ್ರ ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ವಾ. 30.0816–22725903 ಸಂಪರ್ಕಿಸಬಹುದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ.ಸಿದ್ದರಾಮಣ್ಣ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


