ತುಮಕೂರು: ಜಿಲ್ಲೆಯ ತುಮಕೂರು ತಾಲ್ಲೂಕಿನ ಊರ್ಡಿಗೆರೆ ಹೋಬಳಿಯ ದುರ್ಗದಹಳ್ಳಿ ಗ್ರಾಮದಲ್ಲಿ ಚಿರತೆಯೊಂದು ಭೀಕರ ದಾಳಿ ನಡೆಸಿದ್ದು, ಬರೋಬ್ಬರಿ 20 ಕುರಿಗಳನ್ನು ಕೊಂದು ಹಾಕಿರುವ ಘಟನೆ ನಡೆದಿದೆ.
ದುರ್ಗದಹಳ್ಳಿ ಗ್ರಾಮದ ಹೇಮಂತ್ ಎಂಬುವರಿಗೆ ಸೇರಿದ ತೋಟದ ಮನೆಯ ಕುರಿ ರೊಪ್ಪಕ್ಕೆ (ಕುರಿಗಳನ್ನು ಕಟ್ಟುವ ಜಾಗ) ಬುಧವಾರ ರಾತ್ರಿ ನುಗ್ಗಿದ ಚಿರತೆ ಈ ಸಂಹಾರ ನಡೆಸಿದೆ. ಹೇಮಂತ್ ಅವರು ಗುರುವಾರ ಬೆಳಿಗ್ಗೆ ಎಂದಿನಂತೆ ಕುರಿ ರೊಪ್ಪದ ಬಳಿ ಹೋದಾಗ, ಕುರಿಗಳು ರಕ್ತಸಿಕ್ತವಾಗಿ ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಸಾಕು ಪ್ರಾಣಿಗಳ ಸಾವಿನಿಂದ ರೈತ ಹೇಮಂತ್ ಅವರಿಗೆ ಆರ್ಥಿಕವಾಗಿ ದೊಡ್ಡ ನಷ್ಟ ಉಂಟಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದಲ್ಲಿ ಈ ಹಿಂದೆ ಎಂದೂ ಚಿರತೆ ದಾಳಿ ನಡೆದ ಉದಾಹರಣೆಗಳಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೊದಲ ಬಾರಿಗೆ ಇಂತಹ ಘಟನೆ ನಡೆದಿರುವುದರಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಲಯ ಅರಣ್ಯಾಧಿಕಾರಿ ನಮಿತಾ ಅವರು, “ದುರ್ಗದಹಳ್ಳಿ ಭಾಗದಲ್ಲಿ ಈ ಹಿಂದೆ ಚಿರತೆ ದಾಳಿ ಪ್ರಕರಣಗಳು ವರದಿಯಾಗಿರಲಿಲ್ಲ. ಇದೀಗ ಘಟನೆ ನಡೆದಿರುವುದರಿಂದ ರೈತರಿಗೆ ರಕ್ಷಣೆ ನೀಡಲು ಮತ್ತು ಚಿರತೆಯನ್ನು ಸೆರೆಹಿಡಿಯಲು ಕೂಡಲೇ ಬೋನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


