ತುಮಕೂರು: ನಗರದ ಟೌನ್‌ಹಾಲ್ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಇಂದು ಅಂಬೇಡ್ಕರ್ ಯುವ ಸೇನೆ ವತಿಯಿಂದ 208ನೇ ಭೀಮ–ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಲಾಯಿತು.
ತಮ್ಮನ್ನು ಅವಮಾನ ಮಾಡಿ, ಸಮಾನತೆಯನ್ನು ನಿರಾಕರಿಸಿದ ಮರಾಠರ ಎರಡನೇ ಬಾಜೀರಾಯನ 28 ಸಾವಿರ ಮರಾಠ ಸೈನಿಕರ ವಿರುದ್ಧ ಐದು ನೂರು ಜನ ಮಹರ್ ಸೈನಿಕರು, ಸ್ವಾಭಿಮಾನಕ್ಕಾಗಿ ಭೀಮಾ ನದಿ ತೀರದ ಕೋರೆಗಾಂವ್ ಬಳಿ ನಡೆಸಿದ ಯುದ್ಧದ 208ನೇ ವಿಜಯೋತ್ಸವದ ಅಂಗವಾಗಿ ಭೀಮಕೋರೆಗಾಂವ್ ಯುದ್ಧಸ್ಮಾರಕದ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವ ಸೂಚಿಸುವ ಮೂಲಕ ಯುದ್ಧದಲ್ಲಿ ಮಡಿದ ಮಹರ್ ಸೈನ್ಯದ 22 ಜನರನ್ನು ಸ್ಮರಿಸಲಾಯಿತು.
ಈ ವೇಳೆ ಮಾತನಾಡಿದ ಅಂಬೇಡ್ಕರ್ ಯುವ ಸೇನೆಯ ಜಿಲ್ಲಾಧ್ಯಕ್ಷ ಗಣೇಶ್.ಜಿ., ಭೀಮ ಕೋರೆಗಾಂವ್ ವಿಜಯೋತ್ಸವ ದೇಶದ ದಲಿತರಿಗೆ ಸ್ವಾಭಿಮಾನದ ಸಂಕೇತವಾಗಿದೆ. ದಲಿತರ ಸ್ವಾಭಿಮಾನಕ್ಕೆ, ಆತ್ಮ ಗೌರವಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ ಎಂಬುದಕ್ಕೆ ಈ ಯುದ್ಧ ಸಾಕ್ಷಿಯಾಗಿದೆ. ಲಂಡನ್‌ನ ಕೊಲಂಬಿಯಾ ವಿವಿಯಲ್ಲಿ ಅಂಬೇಡ್ಕರ್ ಕಲಿಯುವ ವೇಳೆ ಅಲ್ಲಿನ ಲೈಬ್ರರಿಯಲ್ಲಿ ದೊರೆತ ಪುಸ್ತಕದಿಂದ ಎರಡನೇ ಬಾಜೀರಾಯನ ಸೈನ್ಯದ ವಿರುದ್ಧ ದಲಿತರು ನಡೆಸಿದ ಸ್ವಾಭಿಮಾನಿ ಯುದ್ಧವನ್ನು ಅರಿತು, ಯುದ್ಧದಲ್ಲಿ ಮಡಿದ ಮಹರ್ ಸೈನಿಕರಿಗಾಗಿ ಬ್ರಿಟಿಷ್ ಅಧಿಕಾರಿಗಳು ನಿರ್ಮಿಸಿದ ಸ್ಮಾರಕವನ್ನು ಪತ್ತೆ ಹಚ್ಚುವ ಮೂಲಕ ಇತಿಹಾಸದಲ್ಲಿ ಮುಚ್ಚಿ ಹೋಗಿದ್ದ ಮಹಾನ್ ಘಟನೆಯನ್ನು ಜಗತ್ತಿಗೆ ಪರಿಚಯಿಸಿದರು. ಬಾಬಾ ಸಾಹೇಬರು ತಾವು ಬದುಕಿದ್ದಷ್ಟು ವರ್ಷ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಜನವರಿ 01 ರಂದು ಭೀಮ-ಕೋರೆಗಾಂವ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಮಡಿದ ಯೋಧರಿಗೆ ನಮನ ಸಲ್ಲಿಸುವ ಕೆಲಸ ಮಾಡುತ್ತಿದ್ದರು. ಅದೇ ರೀತಿಯಲ್ಲಿ ನಾವುಗಳ ಸಹ ಪ್ರತಿವರ್ಷ ಜನವರಿ 01 ರಂದು ಮಡಿದ ಯೋಧರನ್ನು ಸ್ಮರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಮುಖಂಡರಾದ ಸೌಭಾಗ್ಯಮ್ಮ ಮಾತನಾಡಿ, ಇತಿಹಾಸದ ಪುಟಗಳಲ್ಲಿ ಮುಚ್ಚಿ ಹೋಗಿದ್ದ ಭೀಮ-ಕೋರೆಗಾಂವ್ ಹೋರಾಟವನ್ನು ತಮ್ಮ ಅಧ್ಯಯನ ಮೂಲಕ ಹೊರತಂದು ದಲಿತರು ಸಹ ವೀರರೇ, ಅವರ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ ಎಂಬುದಕ್ಕೆ 500 ಜನ ಮಹರ್ ಸೈನಿಕರು 28 ಸಾವಿರ ಮರಾಠರ ಪೇಶ್ವೆ ಸೈನಿಕರನ್ನು ಸದೆಬಡಿದ ಈ ಯುದ್ಧವೇ ಸಾಕ್ಷಿ. ಇದು ನಮ್ಮೆಲ್ಲರ ಸ್ವಾಭಿಮಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು.
ಡಿಎಸ್‌ಎಸ್ ಮುಖಂಡ ಪಿ.ಎನ್.ರಾಮಯ್ಯ ಮಾತನಾಡಿ, ಭೀಮ–ಕೋರೆಗಾಂವ್ ಯುದ್ಧ ದಲಿತರ ಸ್ವಾಭಿಮಾನದ ಸಂಕೇತ. ಇದನ್ನು ಜಗತ್ತಿನ ಮುಂದೆ ಸಾಕ್ಷ್ಯಾಧಾರಗಳ ಮೂಲಕ ತೆರೆದಿಡುವ ಮೂಲಕ ಬಾಬಾ ಸಾಹೇಬರು, ದಲಿತರಿಗೆ ಒಂದು ಎದೆಗಾರಿಕೆಯನ್ನು ಮೂಡಿಸಿದ್ದಾರೆ ಎಂದರು.
ದಲಿತ ಮುಖಂಡರಾದ ದಾಸಪ್ಪ ಮಾತನಾಡಿದರು. ಈ ವೇಳೆ ಮುಖಂಡರಾದ ಆಟೋ ಶಿವರಾಜು, ಡಿ. ಕೆ.ಇಂದ್ರಕುಮಾರ್, ಪಾಲಿಕೆ ಮಾಜಿ ಸದಸ್ಯ ನಯಾಜ್, ನರಸಿಂಹಮೂರ್ತಿ, ದೊಡ್ಡಯ್ಯ, ದಾಸಪ್ಪ, ಲಕ್ಷ್ಮಿಕಾಂತ್, ಮಾರುತಿ, ಪಾಲಿಕೆ ನೌಕರರ ಸಂಘದ ಗೌರವಾಧ್ಯಕ್ಷ ಅಂಜನಪ್ಪ, ಸೌಭಾಗ್ಯ, ಕಿರಣ್, ಲೋಕೇಶ್, ಶೆಟ್ಟಾಳಯ್ಯ, ಮಂಜುನಾಥ್, ಹಾಲೇಶ್ ಮತ್ತಿತರರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


