ತುಮಕೂರು: ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ (ಜನ ಜಾತಿ ಗಣತಿ) ಭಾಗವಹಿಸದಿರಲು ಆಶಾ ಕಾರ್ಯಕರ್ತೆಯರು ನಿರ್ಧರಿಸಿದ್ದಾರೆ.
ನಗರದಲ್ಲಿ ಮಂಗಳವಾರ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಎಐಯುಟಿಯುಸಿ ವತಿಯಿಂದ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಮೋಹನ್ ಅವರಿಗೆ ಮನವಿ ಸಲ್ಲಿಸಿ, ಸಮೀಕ್ಷೆಯಿಂದ ಕೈ ಬಿಡುವಂತೆ ಒತ್ತಾಯಿಸಲಾಯಿತು. ‘ಆಶಾ ಕಾರ್ಯಕರ್ತೆಯರು ಸಮೀಕ್ಷೆಗೆ ಪೂರ್ವಭಾವಿಯಾಗಿ ಪ್ರತಿ ಮನೆಗೆ ತೆರಳಿ ನಮೂನೆ ವಿತರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಈ ಹಿಂದೆ ಸಮೀಕ್ಷೆ ನಡೆಸಿದ್ದಕ್ಕೆ ನಿಗದಿಪಡಿಸಿದ ಗೌರವ ಧನದಲ್ಲಿ ಒಂದು ಪೈಸೆಯನ್ನೂ ನೀಡಿಲ್ಲ. ಈ ವರ್ಷ ಗೌರವ ಧನವೂ ಹೆಚ್ಚಿಸಿಲ್ಲ. ಸಮೀಕ್ಷೆಗೆ ಸ್ವಂತ ಹಣ ಖರ್ಚು ಮಾಡಿ, ಬರಿಗೈನಲ್ಲಿ ಮನೆಗೆ ಬರುವಂತಾಗಿದೆ’ ಎಂದು ಕಾರ್ಯಕರ್ತೆಯರು ಅಳಲು ತೋಡಿಕೊಂಡರು.
ಸಮೀಕ್ಷೆಯಲ್ಲಿ ಭಾಗವಹಿಸುವ ಆಶಾ ಕಾರ್ಯಕರ್ತೆಯರಿಗೆ ಗ್ರಾಮೀಣ ಭಾಗದಲ್ಲಿ 5 ಸಾವಿರ, ನಗರದಲ್ಲಿ 10 ಸಾವಿರ ಗೌರವಧನ ನಿಗದಿ ಮಾಡಬೇಕು. ಇಲ್ಲವೇ ಸಮೀಕ್ಷೆ ಕಾರ್ಯದಿಂದ ಕೈಬಿಡಬೇಕು. ಈ ಹಿಂದೆ ನಡೆಸಿದ್ದ ಗ್ಯಾರಂಟಿ ಸಮೀಕ್ಷೆಯ ಬಾಕಿ ಗೌರವಧನ 1 ಸಾವಿರ ಕೂಡಲೇ ವಿತರಿಸಬೇಕು. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ನಡೆಸಿದವರಿಗೆ ನಿಗದಿಯಾಗಿದ್ದ ಬಾಕಿ ಸಂಭಾವನೆ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಗೌರವ ಅಧ್ಯಕ್ಷೆ ಮಂಜುಳಾ ಗೋನವಾರ, ಜಿಲ್ಲಾ ಅಧ್ಯಕ್ಷೆ ಎಂ.ಆರ್.ನಿರ್ಮಲಾ, ಜಿಲ್ಲಾ ಸಮಿತಿ ಸದಸ್ಯರಾದ ಶೋಭಾ, ಮಂಜುಳಾ ಇತರರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC