ತುಮಕೂರು: ಅಕ್ಷರ, ಅನ್ನ, ಆಶ್ರಯ ಸೇವೆಯ ಮೂಲಕ ತ್ರಿವಿಧ ದಾಸೋಹಿಯಾಗಿರುವ ಸಿದ್ದಗಂಗಾ ಮಠದ ಡಾ. ಶಿವಕುಮಾರ್ ಸ್ವಾಮೀಜಿಗಳಿಂದಾಗಿ ತುಮಕೂರು ನಗರ ದಾಸೋಹ ಯೂನಿವರ್ಸಿಟಿಯಾಗಿದೆ. ಸ್ವಾಮೀಜಿಗಳ ದಾಸೋಹ ಪ್ರೇರಣೆ ಹಾಗೂ ಅವರ ಮೇಲಿನ ಭಕ್ತಿಯಿಂದಾಗಿ ನಗರದಲ್ಲಿ ಭಕ್ತರು, ಸಂಘಸಂಸ್ಥೆಗಳು ರಾಮನವಮಿಯಾಗಲಿ, ಹನುಮ ಜಯಂತಿಯಾಗಲಿ, ರಾಜ್ಯೋತ್ಸವವಾಗಲಿ ಅಲ್ಲಿ ಅನ್ನದಾಸೋಹ ಏರ್ಪಡಿಸುವ ಪದ್ಧತಿ ರೂಢಿಸಿಕೊಂಡಿದ್ದಾರೆ ಎಂದು ಹಿರೇಮಠಾಧ್ಯಕ್ಷರಾದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶನಿವಾರ ನಗರದ ವಿಶ್ವವಿದ್ಯಾಲಯದ ಎದುರು ಬಸವ ಸೇವೆ, ಕನ್ನಡ ಮತ್ತು ಸಂಸ್ಕೃತಿ ವೇದಿಕೆ ಹಾಗೂ ಭಕ್ತರು ಡಾ. ಶಿವಕುಮಾರ್ ಸ್ವಾಮೀಜಿಗಳ 119ನೇ ಜನ್ಮವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಾಮೀಜಿಗಳಿಗೆ ಭಕ್ತಿ ಸಮರ್ಪಣೆ ಹಾಗೂ ಅನ್ನದಾಸೋಹ ಕಾರ್ಯಕ್ರಮದಲ್ಲಿ ದಾಸೋಹ ವಿತರಣೆ ಮೂಲಕ ಹಿರೇಮಠ ಶ್ರೀಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದು ಡಾ.ಶಿವಕುಮಾರ್ ಸ್ವಾಮೀಜಿಗಳನ್ನು ನಾವು ಭಕ್ತಿಯಿಂದ ಸ್ಮರಿಸುತ್ತೇವೆ. ಅವರ ತ್ರಿವಿಧ ದಾಸೋಹ ಸೇವೆ ವಿಶ್ವವಿಖ್ಯಾತವಾಗಿದೆ, ಪೂಜ್ಯರ ಪ್ರೇರಣೆಯಿಂದ ಭಕ್ತರು ಎಲ್ಲಾ ಕಾರ್ಯಕ್ರಮಗಳಲ್ಲಿ ಅನ್ನದಾಸೋಹದ ಸಂಸ್ಕೃತಿ ಅಳವಡಿಸಿಕೊಂಡಿದ್ದು, ಪೂಜ್ಯರ ಕಾರಣದಿಂದ ತುಮಕೂರು ದಾಸೋಹ ವಿಶ್ವವಿದ್ಯಾಲಯವಾಗಿದೆ ಎಂದರು.
ಇಂದು ಪ್ರಪಂಚದಲ್ಲಿ ಯುದ್ಧ ನಡೆಯುತ್ತಿದೆ. ಯುದ್ಧದಿಂದ ಜಗತ್ತಿಗೆ ಒಳ್ಳೆಯದಾಗುವುದಿಲ್ಲ. ಡಾ. ಶಿವಕುಮಾರ್ ಸ್ವಾಮೀಜಿಗಳ ತಪೋಶಕ್ತಿಯಿಂದ ಉದ್ರಿಕ್ತ ಮನಸ್ಸುಗಳು ಶಾಂತವಾಗಿ ಯುದ್ಧ ನಿಲ್ಲುವಂತಾಗಲಿ ಎಂದು ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬಸವ ಸೇವೆ ಅಧ್ಯಕ್ಷ ಕನ್ನಡ ಪ್ರಕಾಶ್, ರೈಲ್ವೆ ಪ್ರಯಾಣಿಕರ ಮಂಡಳಿ ಸದಸ್ಯ ಲಕ್ಷ್ಮೀನಾರಾಯಣ, ಮುಖಂಡರಾದ ಬಿ.ಬಿ. ಮಹದೇವಯ್ಯ, ಕೋಮಲ ವೀರಭದ್ರಯ್ಯ, ನಂದಿನಿ ಶಿವಕುಮಾರ್, ರಾಮಕೃಷ್ಣಯ್ಯ, ಕಗ್ಗೆರೆ ಮಂಜುನಾಥ್, ರಾಮಣ್ಣ, ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಂ. ಗೋಪಿ, ಭಾನುಪ್ರಕಾಶ್, ಪ್ರೊ. ಕರಿಯಣ್ಣ, ನಂದೀಶ್, ಯಡಿಯೂರಪ್ಪ, ಬನಶಂಕರಿ ಬಾಬು, ಭಾನುಪ್ರಕಾಶ್, ಟಿ.ಕೆ. ಆನಂದ್, ಕೊಪ್ಪಳ್ ನಾಗರಾಜು, ಮಲ್ಲೇಶಯ್ಯ, ಪ್ರತಾಪ್, ಆದಿಲ್ ಬಾಷಾ, ಕೆ.ಹೆಚ್. ವೆಂಕಟೇಶ್, ಕೆ. ಶಿವಕುಮಾರ್ ಮೊದಲಾದವರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


