ತುಮಕೂರು : ನಗರದ ರೈಲ್ವೆ ಪ್ರಯಾಣಿಕರ ವೇದಿಕೆಯಿಂದ ಇಂದು (ಆ.3) ತುಮಕೂರು — ಬೆಂಗಳೂರು ಫಾಸ್ಟ್ ಪ್ಯಾಸೆಂಜರ್ ರೈಲಿನ 12ನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಲಾಯಿತು.
ರೈಲಿನ ಹುಟ್ಟುಹಬ್ಬವನ್ನು ನಗರದ ರೈಲ್ವೆ ಪ್ರಯಾಣಿಕರ ವೇದಿಕೆ ಕಳೆದ 12 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ. ರೈಲ್ವೆ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರ್ಣಮ್ ರಮೇಶ್, ರೈಲ್ವೆ ಪ್ರಯಾಣಿಕರ ವೇದಿಕೆ ಖಜಾಂಚಿ ಬಾಲಾಜಿ, ಹಾಗೂ ಸದಸ್ಯ ಶಿವಕುಮಾರ ಸ್ವಾಮಿ ಮಾತನಾಡಿದರು.
ಬೆಂಗಳೂರಿಗೆ ಪ್ರತಿದಿನ ಸಂಚರಿಸುವ ಉದ್ಯೋಗಿಗಳಿಗೆ ಅನುಕೂಲವಾಗಲೆಂದು ನೈಋುತ್ಯ ರೈಲ್ವೆ ಅಧಿಕಾರಿಗಳ ಮನವೊಲಿಸಿದ್ದ ರೈಲ್ವೆ ಪ್ರಯಾಣಿಕರ ವೇದಿಕೆ 2013ರಂದು ತುಮಕೂರು–ಬೆಂಗಳೂರು ಫಾಸ್ಟ್ ಪ್ಯಾಸೆಂಜರ್ ರೈಲಿನ ಬೇಡಿಕೆ ಈಡೇರಿಸಿಕೊಂಡಿತ್ತು. ನೂತನ ರೈಲು ಆರಂಭಕ್ಕೆ ಕಾರಣವಾಗಿದ್ದ ಪ್ರಯಾಣಿಕರ ವೇದಿಕೆ ರೈಲ್ವೆ ಪ್ರಯಾಣಿಕರಿಗೆ ವಿವಿಧ ರೀತಿಯಲ್ಲಿ ಕೆಲಸ ಮಾಡುತ್ತಿದೆ.
ಪ್ರಯಾಣಿಕರ ಸಂಕಷ್ಟ ನಿವಾರಣೆಗೆ ಆರಂಭಗೊಂಡ ರೈಲಿನ ಹುಟ್ಟುಹಬ್ಬದ ದಿನಾಚರಣೆ ಸಂಭ್ರಮ ಇಂದಿಗೂ ಮುಂದುವರೆದಿದೆ. ರೈಲು ಆರಂಭಗೊಂಡ ನೆನಪಿಗಾಗಿ ಆ.3 ರಂದು ಪ್ರತಿ ವರ್ಷವೂ ರೈಲಿಗೆ ಹುಟ್ಟುಹಬ್ಬ ಆಚರಿಸಿ, ಪ್ರಯಾಣಿಕರೊಂದಿಗೆ ವೇದಿಕೆಯ ಪದಾಧಿಕಾರಿಗಳು ಸಂಭ್ರಮಿಸುತ್ತಿದ್ದಾರೆ.
ರೈಲಿಗೆ ಬಾಳೆ ಕಂದು, ಮಾವಿನ ಸೊಪ್ಪು ಕಟ್ಟಿ, ಹೂವಿನಿಂದ ಅಲಂಕರಿಸಿದರು. ಬಲೂನ್ ಬಂಟಿಂಗ್ಸ್‌ಗಳನ್ನೂ ಕಟ್ಟಿ ಸಂಭ್ರಮಿಸಲಾಯಿತು. ಬೆಳಗ್ಗೆ 8 ಗಂಟೆಗೆ ರೈಲಿನ ಲೊಕೊಪೈಲಟ್ ಹಾಗೂ ಸಹ ಲೊಕೊಪೈಲಟ್ ಮತ್ತು ಗಾರ್ಡ್‌ಗಳು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಅಲ್ಲದೆ, ಪ್ರಯಾಣಿಕರಿಗೆ ಕೇಕ್ ವಿತರಿಸಲಾಯಿತು. ತುಮಕೂರು ಹಾಗೂ ಬೆಂಗಳೂರು ನಡುವಿನ ಈ ರೈಲು ಪ್ರತಿದಿನ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನತ್ತ ಸಾಗುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC