ತುಮಕೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ವೇಗವಾಗಿ ಹೆಚ್ಚುತ್ತಿದ್ದು, ಇವುಗಳನ್ನು ನಿಯಂತ್ರಿಸುವುದು ಮತ್ತು ಅಪರಾಧಿಗಳನ್ನು ಪತ್ತೆಹಚ್ಚುವುದು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದೆ ಎಂದು ನಿವೃತ್ತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಅಬ್ದುಲ್ ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಡಿಎಆರ್ (DAR) ಮೈದಾನದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಪೊಲೀಸ್ ಧ್ವಜ ದಿನಾಚರಣೆ’ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪೊಲೀಸ್ ವೃತ್ತಿಯು ಹೆಚ್ಚಿನ ಒತ್ತಡದಿಂದ ಕೂಡಿರುತ್ತದೆ. ಆದಾಗ್ಯೂ, ಸಂಕಷ್ಟದಲ್ಲಿರುವವರು ಮತ್ತು ಅಶಕ್ತರು ಠಾಣೆಗೆ ಬಂದಾಗ ಅವರ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು. ಜನರ ನೋವಿಗೆ ಸ್ಪಂದಿಸಿ ಕೆಲಸ ಮಾಡಿಕೊಡುವುದು ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯ ಕರ್ತವ್ಯ ಎಂದು ಅವರು ಕಿವಿಮಾತು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿ, “ಪೊಲೀಸ್ ಧ್ವಜ ದಿನಾಚರಣೆಯು ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಸ್ಮರಿಸುವ ವಿಶೇಷ ಸಂದರ್ಭವಾಗಿದೆ. ಧ್ವಜಗಳ ಮಾರಾಟದಿಂದ ಸಂಗ್ರಹವಾಗುವ ಹಣವನ್ನು ಸಂಪೂರ್ಣವಾಗಿ ನಿವೃತ್ತ ಪೊಲೀಸರ ಕ್ಷೇಮಾಭಿವೃದ್ಧಿ ನಿಧಿಗೆ ಬಳಸಲಾಗುತ್ತದೆ. ಕಳೆದ ವರ್ಷ ಜಿಲ್ಲೆಯಲ್ಲಿ ಧ್ವಜ ಮಾರಾಟದಿಂದ ಒಟ್ಟು ₹26.95 ಲಕ್ಷ ಹಣ ಸಂಗ್ರಹವಾಗಿದೆ,” ಎಂದು ಮಾಹಿತಿ ನೀಡಿದರು.
ಸದ್ಯ ನಿವೃತ್ತ ಪೊಲೀಸರ ಕ್ಷೇಮಾಭಿವೃದ್ಧಿ ನಿಧಿಯ ಖಾತೆಯಲ್ಲಿ ₹20.40 ಲಕ್ಷ ಠೇವಣಿ ಹಾಗೂ ಉಳಿತಾಯ ಖಾತೆಯಲ್ಲಿ ₹23.21 ಲಕ್ಷ ಹಣ ಇರುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೇವೆಯಿಂದ ನಿವೃತ್ತರಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಎಲ್. ಪುರುಷೋತ್ತಮ್, ಸಿ. ಗೋಪಾಲ್ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


