ತುಮಕೂರು: ನಗರದ ಬನಶಂಕರಿಯಲ್ಲಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಅಣ್ಣನೇ ತನ್ನ ಒಡಹುಟ್ಟಿದ ತಮ್ಮನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಅಚ್ಚರಿಯೆಂದರೆ, ಈ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ತಂದೆ ಮತ್ತು ಮಗ ಹೊಸ ಕಥೆ ಕಟ್ಟಿದ್ದರಾದರೂ, ವೈದ್ಯರ ಸಮಯಪ್ರಜ್ಞೆಯಿಂದ ಸತ್ಯ ಬಯಲಾಗಿದೆ.
ತುಮಕೂರಿನ ಬನಶಂಕರಿ ನಿವಾಸಿಗಳಾದ ನವೀನ್ ಹಾಗೂ ಸ್ಟಾಲಿನ್ ಇಬ್ಬರು ಸಹೋದರರು. ಇವರ ನಡುವೆ ಯಾವುದೋ ವಿಷಯಕ್ಕೆ ಗಲಾಟೆ ನಡೆದಿದೆ. ಗಲಾಟೆ ತಾರಕಕ್ಕೇರಿ ಅಣ್ಣ ನವೀನ್, ತಮ್ಮ ಸ್ಟಾಲಿನ್ ಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಸ್ಟಾಲಿನ್ ನನ್ನು ತಂದೆ ಜಾನ್ ಪಾಲ್ ಆಸ್ಪತ್ರೆಗೆ ದಾಖಲಿಸಿದ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಸ್ಟಾಲಿನ್ ಮೃತಪಟ್ಟಿದ್ದಾನೆ.
ತನ್ನ ಮಗನೇ ಇನ್ನೊಬ್ಬ ಮಗನನ್ನು ಕೊಲೆ ಮಾಡಿದ್ದಾನೆ ಎಂಬ ವಿಷಯ ಯಾರಿಗೂ ತಿಳಿಯಬಾರದೆಂದು ತಂದೆ ಜಾನ್ ಪಾಲ್ ಸಂಚು ರೂಪಿಸಿದ್ದರು. ಸ್ಟಾಲಿನ್ ಮನೆಯಲ್ಲಿ ಕುಸಿದು ಬಿದ್ದಾಗ ಹೊಟ್ಟೆಗೆ ಗಾಯವಾಗಿದೆ ಎಂದು ಅವರು ವೈದ್ಯರಿಗೆ ಮತ್ತು ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ್ದರು.
ಆದರೆ, ಗಾಯದ ಸ್ವರೂಪವನ್ನು ಗಮನಿಸಿದ ವೈದ್ಯರಿಗೆ ಅನುಮಾನ ಬಂದಿದೆ. ಇದು ಬಿದ್ದು ಆಗಿರುವ ಗಾಯವಲ್ಲ, ಬದಲಿಗೆ ಯಾವುದೋ ಹರಿತವಾದ ವಸ್ತುವಿನಿಂದ ಚುಚ್ಚಿರುವುದರಿಂದ ಉಂಟಾದ ಗಾಯ ಎಂದು ವೈದ್ಯರು ಸ್ಪಷ್ಟಪಡಿಸಿದರು.
ವೈದ್ಯರ ಮಾಹಿತಿಯ ಆಧಾರದ ಮೇಲೆ ಜಯನಗರ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾದರು. ತಂದೆ ಜಾನ್ ಪಾಲ್ ಹಾಗೂ ಅಣ್ಣ ನವೀನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅಸಲಿ ವಿಷಯ ಹೊರಬಂದಿದೆ. ಸದ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಾದ ತಂದೆ ಮತ್ತು ಮಗನನ್ನು ಬಂಧಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


