ತುಮಕೂರು: ಜಿಲ್ಲಾ ಕೇಂದ್ರದ ಮುಖ್ಯ ಬಸ್ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ಭೀಕರ ಅಪಘಾತವೊಂದು ಸಂಭವಿಸಿದ್ದು, ಚಲಿಸುತ್ತಿದ್ದ ಬಸ್ ಹತ್ತಲು ಹೋದ ವಿದ್ಯಾರ್ಥಿನಿಯ ಕಾಲಿನ ಮೇಲೆ ಬಸ್ ಚಕ್ರ ಹರಿದಿದೆ. ಘಟನೆಯಲ್ಲಿ ವಿದ್ಯಾರ್ಥಿನಿಯ ಕಾಲು ತೀವ್ರವಾಗಿ ಜಖಂಗೊಂಡಿದ್ದು, ಮೂಳೆ ಮುರಿತ ಸಂಭವಿಸಿದೆ.
ಗಾಯಗೊಂಡ ವಿದ್ಯಾರ್ಥಿನಿಯನ್ನು 17 ವರ್ಷದ ಹರ್ಷಿತಾ ಎಂದು ಗುರುತಿಸಲಾಗಿದೆ. ಈಕೆ ನಗರದ ಸಿದ್ದರಾಮಯ್ಯ ಆಸ್ಪತ್ರೆಯಲ್ಲಿ ಪ್ಯಾರಾಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾಳೆ ಎನ್ನಲಾಗಿದೆ.
ತುಮಕೂರಿನಿಂದ ಮಧುಗಿರಿಗೆ ಹೊರಟಿದ್ದ ಬಸ್ ಹತ್ತಲು ವಿದ್ಯಾರ್ಥಿನಿ ಮುಂದಾಗಿದ್ದಾಳೆ. ಈ ವೇಳೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ ವಿಪರೀತ ನೂಕಾಟ–ತಳ್ಳಾಟ ಉಂಟಾಗಿದೆ. ನೂಕಾಟದ ರಭಸಕ್ಕೆ ಹರ್ಷಿತಾ ಆಯತಪ್ಪಿ ಕೆಳಗೆ ಬಿದ್ದಿದ್ದು, ಇದೇ ವೇಳೆ ಚಲಿಸುತ್ತಿದ್ದ ಬಸ್ ನ ಹಿಂಬದಿಯ ಟೈರ್ ಆಕೆಯ ಕಾಲಿನ ಮೇಲೆ ಹರಿದಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಕೆಎಸ್ ಆರ್ ಟಿಸಿ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿ ಆಕೆಯನ್ನು ರಕ್ಷಿಸಿದ್ದಾರೆ. ತಕ್ಷಣವೇ 108 ಅಂಬುಲೆನ್ಸ್ ಮೂಲಕ ಹರ್ಷಿತಾಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


