ತುಮಕೂರು: ಜಾತಿವಾರು ಸಮೀಕ್ಷೆ ಆರಂಭವಾಗಿ ಐದನೇ ದಿನಕ್ಕೆ ಕಾಲಿಟ್ಟಿದ್ದರೂ ತುಮಕೂರು ಜಿಲ್ಲೆಯಲ್ಲಿ ಮಾತ್ರ ಮುಂದೆ ಸಾಗುತ್ತಿಲ್ಲ. ಇತರ ಜಿಲ್ಲೆಗಳಿಗಿಂತ ಸಾಕಷ್ಟು ಹಿಂದೆ ಉಳಿದಿದ್ದು, ಆಮೆ ವೇಗದಲ್ಲಿ ನಡೆಯುತ್ತಿದೆ.
ತಾಂತ್ರಿಕ ಸಮಸ್ಯೆ ಶುಕ್ರವಾರ ಸಹ ಮುಂದುವರಿದಿದ್ದು, ಸಮೀಕ್ಷೆಗೆ ತೆರಳಿದ್ದ ಶಿಕ್ಷಕರು ಕೆಲವು ಕಡೆಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆ ವರೆಗೂ ಒಂದೂ ಮನೆಯ ಸಮೀಕ್ಷೆ ಮಾಡಲು ಸಾಧ್ಯವಾಗಿಲ್ಲ. ಸಮೀಕ್ಷೆ ಮಾಡಲೇಬೇಕು ಎಂದು ಶಿಕ್ಷಕರ ಮೇಲೆ ಅಧಿಕಾರಿಗಳು ನಿರಂತರವಾಗಿ ಒತ್ತಡ ಹಾಕುತ್ತಲೇ ಇದ್ದಾರೆ. ಆದರೆ ಸಮೀಕ್ಷೆ ಸಾಧ್ಯವಾಗದೆ ಸಾಕಷ್ಟು ಮಂದಿ ಕೈಚೆಲ್ಲಿ, ಅಸಹಾಯಕರಾಗಿ ಕುಳಿತಿದ್ದಾರೆ.
ಮೊದಲು ತಾಂತ್ರಿಕ ಸಮಸ್ಯೆ ಬಗೆಹರಿಸಿ. ನಂತರ ಸಮೀಕ್ಷೆ ಮಾಡುವಂತೆ ಹೇಳಿ. ಆಗ ಕೆಲಸ ಮಾಡುತ್ತೇವೆ. ಸಮಸ್ಯೆ ಇದ್ದರೂ ಸುಮ್ಮನೆ ಸಮೀಕ್ಷೆ ಮಾಡಿ ಎಂದರೆ ಹೇಗೆ? ಬೆಳಿಗ್ಗೆಯಿಂದ ಸಂಜೆ ವರೆಗೂ ಪ್ರಯತ್ನಿಸಿದರೂ ಒಂದು ಕುಟುಂಬದ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಆದರೆ ಕೆಲಸದಲ್ಲಿ ತೊಡಗಿಸಿಕೊಂಡಿಲ್ಲ ಎಂದು ಹೇಳಿ ನೋಟಿಸ್ ಕೊಡಲು ಮುಂದಾಗಿದ್ದಾರೆ. ಇದು ಯಾವ ರೀತಿಯ ನ್ಯಾಯ ಅಂತ ಶಿಕ್ಷಕರು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.
ಏನೇನು ಸಮಸ್ಯೆ:
* ಬಹುತೇಕ ಕಡೆಗಳಲ್ಲಿ ನೆಟ್ ವರ್ಕ್ ಸಮಸ್ಯೆ
* ಕೆಲವು ಗ್ರಾಮಗಳಲ್ಲಿ ನೆಟ್‌ವರ್ಕ್ ಇಲ್ಲದೆ ಮೊಬೈಲ್ ಕಾರ್ಯ ನಿರ್ವಹಿಸುತ್ತಿಲ್ಲ
* ಸಾಕಷ್ಟು ಶಿಕ್ಷಕರಿಗೆ ಪರಿಚಯ ಇರುವ ಪ್ರದೇಶ ನೀಡಿಲ್ಲ
* ಪದೇ ಪದೇ ಆ್ಯಪ್ ಇನ್ ಸ್ಟಾಲ್ ಮಾಡುವ ಸಮಯದಲ್ಲಿ ಮೊಬೈಲ್ ಹ್ಯಾಂಗ್ ಆಗುತ್ತಿದೆ
* ಯುಎಚ್ ಐಡಿ ಕೆಲವು ಕಡೆ ಹಾಕಿಲ್ಲ. ಕೆಲವು ಹಾಕಿದ್ದರೂ ನಂಬರ್ ಬರೆದಿಲ್ಲ
*ಆ್ಯಪ್‌ನಲ್ಲಿ ಅನಗತ್ಯ ಪ್ರಶ್ನೆಗಳಿಗೆ ಉತ್ತರ ಕೇಳಿ ಭರ್ತಿ ಮಾಡಬೇಕಿದೆ
* ಕೋರ್ಟ್ ವ್ಯಾಜ್ಯ ಇರುವ ಬಗ್ಗೆಯೂ ಮಾಹಿತಿ ಕೇಳಲಾಗಿದೆ
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಈರಪ್ಪ, ಆ್ಯಪ್ ಅಪ್ ಡೇಟ್ ಮಾಡಲಾಗಿದೆ. ಈಗ ಯಾವುದೇ ಸಮಸ್ಯೆ ಇಲ್ಲ. ಎಲ್ಲೆಡೆ ಸಮೀಕ್ಷೆ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಶುಕ್ರವಾರದವರೆಗೆ 8,758 ಸಮೀಕ್ಷೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಚುರುಕಾಗಲಿದೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC