ತುಮಕೂರು: ಜಿಲ್ಲಾ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ವೈದ್ಯೆ ಮತ್ತು ಹೊರಗುತ್ತಿಗೆ ನೌಕರ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತುಮಕೂರಿನ ಉಪ್ಪಾರಹಳ್ಳಿಯ ಆಟೋ ಚಾಲಕ ಅವಿನಾಶ್ ಎಂಬುವವರು ತಮ್ಮ ತಾಯಿ ಮಂಗಳಮ್ಮ ಅವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಿಸಲು ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಕಣ್ಣು ಪರೀಕ್ಷಿಸಿದ ತಜ್ಞ ವೈದ್ಯೆ ಸವಿತಾ, ಶಸ್ತ್ರಚಿಕಿತ್ಸೆಯ ಲೆನ್ಸ್ ಗಾಗಿ ₹6,000 ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಉಚಿತವಿರುವುದನ್ನು ಪ್ರಶ್ನಿಸಿದ ಅವಿನಾಶ್ ಅವರಿಗೆ, “ಉಚಿತವಾಗಿ ಚಿಕಿತ್ಸೆ ಬೇಕಿದ್ದರೆ ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ಹೋಗಿ, ಇಲ್ಲಿ ಚಿಕಿತ್ಸೆ ಬೇಕಾದರೆ ಹಣ ಕೊಡಲೇಬೇಕು” ಎಂದು ವೈದ್ಯೆ ಖಡಾಖಂಡಿತವಾಗಿ ಹೇಳಿದ್ದರು ಎನ್ನಲಾಗಿದೆ.
ಲೋಕಾಯುಕ್ತ ದಾಳಿ:
ವೈದ್ಯೆಯ ನಡೆಯಿಂದ ಬೇಸತ್ತ ಅವಿನಾಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಸೋಮವಾರ ವೈದ್ಯೆ ಸವಿತಾ ಅವರ ಸೂಚನೆಯಂತೆ ಹೊರಗುತ್ತಿಗೆ ನೌಕರ ಮನೋಜ್ ಎಂಬಾತ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಇನ್ಸ್‌ಪೆಕ್ಟರ್ ಟಿ.ರಾಜು ನೇತೃತ್ವದ ತಂಡ ದಾಳಿ ನಡೆಸಿ, ಹಣದ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದೆ.
ವಿಚಾರಣೆ ವೇಳೆ ಮನೋಜ್ ಹಣ ಪಡೆದಿದ್ದು ವೈದ್ಯೆ ಸವಿತಾ ಅವರ ಪರವಾಗಿ ಎಂದು ಒಪ್ಪಿಕೊಂಡಿದ್ದು, ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಲೋಕಾಯುಕ್ತ ಎಸ್‌ಪಿ ಎ.ವಿ. ಲಕ್ಷ್ಮೀನಾರಾಯಣ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


