ತುಮಕೂರು: ಅರಣ್ಯ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು, ನಕಲಿ ನೇಮಕಾತಿ ಪತ್ರ ನೀಡಿ ವಂಚಿಸುತ್ತಿದ್ದ ದೊಡ್ಡ ಜಾಲವೊಂದನ್ನು ತುಮಕೂರಿನ ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ತುಮಕೂರಿನ ವಡ್ಡರಹಳ್ಳಿಯ ತೋಟದ ಶೆಡ್ ವೊಂದರಲ್ಲಿ ‘ಮಾಹಿತಿ ಮತ್ತು ತರಬೇತಿ ಕೇಂದ್ರ’ ಎಂಬ ಹೆಸರಿನಲ್ಲಿ ನಕಲಿ ಅಕಾಡೆಮಿಯನ್ನು ನಡೆಸಲಾಗುತ್ತಿತ್ತು. ನೆಲಮಂಗಲದ ಕಿರಣ್ ಹಾಗೂ ತುಮಕೂರಿನ ಪವನ್ ಮತ್ತು ಉದಯ್ ಎಂಬುವವರು ಈ ಜಾಲದ ಸೂತ್ರಧಾರರು ಎಂದು ತಿಳಿದುಬಂದಿದೆ. ಸುಮಾರು 15ಕ್ಕೂ ಹೆಚ್ಚು ಯುವಕರಿಗೆ ಅರಣ್ಯ ಇಲಾಖೆಯ ನೇಮಕಾತಿಗಾಗಿ ಇಲ್ಲಿ ತರಬೇತಿ ನೀಡಲಾಗುತ್ತಿತ್ತು.
ಮೈಸೂರು ವಿಭಾಗದ ಅರಣ್ಯ ಪ್ರದೇಶದಲ್ಲಿ ಖಾಯಂ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ನಂಬಿಸಿ ಪ್ರತಿ ಯುವಕನಿಂದ ₹3 ಲಕ್ಷದಿಂದ ₹5 ಲಕ್ಷದವರೆಗೆ ಹಣ ವಸೂಲಿ ಮಾಡಲಾಗಿತ್ತು.
ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ (IAS) ಅವರ ಹೆಸರಿನಲ್ಲಿ ನಕಲಿ ಆದೇಶ ಪತ್ರಗಳನ್ನು ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಸಹಿ ಇರುವ ನಕಲಿ ನೇಮಕಾತಿ ಪತ್ರಗಳನ್ನು ಸೃಷ್ಟಿಸಿ ಯುವಕರನ್ನು ನಂಬಿಸಲಾಗಿತ್ತು.
ಖಚಿತ ಮಾಹಿತಿಯ ಮೇರೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಪವಿತ್ರಾ ವಿ. ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಈ ನಕಲಿ ಕೇಂದ್ರದ ಮೇಲೆ ದಾಳಿ ನಡೆಸಿದಾಗ ವಂಚನೆಯ ಪೂರ್ಣ ವಿವರಗಳು ಲಭ್ಯವಾಗಿವೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತರಬೇತಿ ಕೇಂದ್ರದಲ್ಲಿದ್ದ ಯುವಕರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


