ತುಮಕೂರು: ಜಿಲ್ಲೆಯ ರೈತರು ಮುಂಗಾರು ಹಂಗಾಮಿನಲ್ಲಿ ಯೂರಿಯಾ ರಸಗೊಬ್ಬರವನ್ನು ಖರೀದಿಸಲು ಇನ್ಮುಂದೆ ‘ಫ್ರೂಟ್ ಐಡಿ’ (FID – Farmer Registration and Unified Beneficiary Information System) ಹೊಂದಿರುವುದು ಕಡ್ಡಾಯವಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಪಿಒಎಸ್ (POS) ಯಂತ್ರದ ಜೊತೆಗೆ ಕೃಷಿ ಇಲಾಖೆಯ ‘ಕೆ-ಕಿಸಾನ್’ ವೆಬ್ಸೈಟ್ ಮೂಲಕ ರೈತರ ಎಫ್ಐಡಿ ಸಂಖ್ಯೆಯನ್ನು ನೋಂದಾಯಿಸಿಕೊಂಡೇ ಗೊಬ್ಬರ ವಿತರಿಸಬೇಕು.
ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಗಟ್ಟುವುದು ಮತ್ತು ರೈತರು ತಮ್ಮ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಮಿತವಾಗಿ ಗೊಬ್ಬರ ಬಳಸುವಂತೆ ನಿಯಂತ್ರಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ರೈತರು ತಮ್ಮ ಜಮೀನಿಗೆ ಎಷ್ಟು ಗೊಬ್ಬರ ಅಗತ್ಯವಿದೆಯೋ ಅಷ್ಟನ್ನು ಮಾತ್ರ ಎಫ್ಐಡಿ ಆಧಾರದ ಮೇಲೆ ಪಡೆಯಬಹುದು.
ಎಫ್ ಐಡಿ ಇಲ್ಲದಿದ್ದರೆ ಏನು ಮಾಡಬೇಕು?
ಇದುವರೆಗೆ ಎಫ್ಐಡಿ (FID) ನೋಂದಣಿ ಮಾಡಿಸದ ರೈತರು ಈ ಕೂಡಲೇ ಈ ಕೆಳಗಿನ ದಾಖಲೆಗಳೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಅಥವಾ ಕಂದಾಯ ಇಲಾಖೆಗೆ ಭೇಟಿ ನೀಡಿ ಹೊಸದಾಗಿ ಐಡಿ ಸೃಜಿಸಿಕೊಳ್ಳಬಹುದು:
- ಜಮೀನಿನ ಎಲ್ಲಾ ಪಹಣಿಗಳು (RTC)
- ಬ್ಯಾಂಕ್ ಖಾತೆ ಪುಸ್ತಕ (Bank Passbook)
- ಆಧಾರ್ ಕಾರ್ಡ್
ಒಂದು ವೇಳೆ ಈಗಾಗಲೇ ಎಫ್ ಐಡಿ ಹೊಂದಿದ್ದು, ಕೆಲವು ಸರ್ವೆ ನಂಬರ್ಗಳು ಬಿಟ್ಟುಹೋಗಿದ್ದರೆ ಅವುಗಳನ್ನು ಕೂಡ ಕೂಡಲೇ ಜೋಡಣೆ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


