ಕೊರಟಗೆರೆ: ಪ್ರಸಕ್ತ ಆಧುನಿಕ ಯುಗದಲ್ಲಿ ಯಾಂತ್ರಿಕೃತ ಕೃಷಿ ಪದ್ಧತಿ ಹೆಚ್ಚಾಗುತ್ತಿದ್ದರೂ, ಹೈನುಗಾರಿಕೆಯಲ್ಲಿ ಇಂದಿಗೂ ರೈತನಿಗೂ ಮತ್ತು ಹಸುವಿಗೂ ಇರುವ ಅವಿನಾಭಾವ ಸಂಬಂಧವನ್ನು ಸಾರುವ ‘ಹಾಲು ಕರೆಯುವ ಸ್ಪರ್ಧೆ’ಯೊಂದು ವಿಜೃಂಭಣೆಯಿಂದ ಜರುಗಿತು.
ಕೊರಟಗೆರೆ ತಾಲ್ಲೂಕಿನ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಆವರಣದಲ್ಲಿ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕ ಸಂಘದ ಒಕ್ಕೂಟ ನಿಯಮಿತ ತುಮಕೂರು ಹಾಗೂ ತಾಲೂಕು ಘಟಕ, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕೊರಟಗೆರೆ, ತುಮಕೂರು ಜಿಲ್ಲಾ ರೈತರ ಮತ್ತು ಎಂ ಪಿ ಸಿ ಎಸ್ ನೌಕರರ ಮತ್ತು ಸಾಮಾನ್ಯ ಕಲ್ಯಾಣ ಟ್ರಸ್ಟ್ ಮಲ್ಲಸಂದ್ರ ಹಾಗೂ ಕುಂಚೀಟಿಗ ಮಹಾ ಸಂಸ್ಥಾನ ಮಠದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಿಶ್ರ ತಳಿರಾಸುಗಳ ಹಾಲು ಕರೆಯುವ ಸ್ಪರ್ಧೆ ಹಾಗೂ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ಜರಗಿ ಈ ಕಾರ್ಯಕ್ರಮ ಕೇವಲ ಸ್ಪರ್ಧೆಯಾಗಿ ಉಳಿಯದೆ, ರೈತರ ಶ್ರಮ ಮತ್ತು ಪಶುಸಂಗೋಪನೆಯ ಮಹತ್ವವನ್ನು ಸಾರುವ ವೇದಿಕೆಯಾಗಿ ಮಾರ್ಪಟ್ಟಿತ್ತು.
ಕಾರ್ಯಕ್ರಮ ಸತತ ಎರಡು ದಿನಗಳ ಕಾಲ ಜರುಗಿ ರೈತರಿಂದ ಸಂಜೆ ಹಾಗೂ ಬೆಳಿಗ್ಗೆ ಎರಡು ಸಮಯದ ಹಾಲು ಕರೆಯುವ ಸ್ಪರ್ಧೆಯನ್ನು ಬಹಳ ಅಚ್ಚುಕಟ್ಟಾಗಿ ಹಾಲು ಒಕ್ಕೂಟ, ಪಶು ಇಲಾಖೆ ಸಹಯೋಗದಲ್ಲಿ ತುಂಬಾ ಯಶಸ್ವಿಯಾಗಿ ಆಯೋಜನೆಗೊಂಡು, ತಾಲೂಕಿನ ವಿವಿಧ ಮೂಲಗಳಿಂದ ಬಂದಂತ 50ಕ್ಕೂ ಹೆಚ್ಚಿನ ರೈತರು ತಮ್ಮ ಹಸುಗಳನ್ನು ಸ್ಪರ್ಧಾ ಕಣಕ್ಕೆ ಉಳಿಸಿ ಎಚ್.ಎಫ್ (HF), ಜರ್ಸಿ ಹಸುಗಳನ್ನ ರೈತರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿದ್ದು, ಹಾಲಿನ ಪ್ರಮಾಣ ಮಾತ್ರವಲ್ಲದೆ, ಹಾಲಿನ ಗುಣಮಟ್ಟ (ಫ್ಯಾಟ್ ಅಂಶ) ಮತ್ತು ಹಸುಗಳ ಆರೋಗ್ಯವನ್ನು ಕೂಡ ತೀರ್ಪುಗಾರರು ಪರಿಗಣಿಸಲ್ಲಾಯಿತು, ನಿರ್ದಿಷ್ಟ ಸಮಯದಲ್ಲಿ ಅತಿ ಹೆಚ್ಚು ಹಾಲು ಕರೆಯುವ ಕೌಶಲ್ಯವನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. ಹಸುಗಳು ಶಾಂತವಾಗಿ ನಿಂತು ಸಹಕರಿಸುತ್ತಿದ್ದರೆ, ರೈತರು ಅಷ್ಟೇ ವೇಗವಾಗಿ ಕೈಚಳಕ ತೋರಿಸುತ್ತಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ಅತಿ ಹೆಚ್ಚು ಹಾಲು ನೀಡಿದ ಹಸುಗಳ ಮಾಲೀಕರಿಗೆ ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಿಸಲಾಯಿತು. ಮೊದಲನೇ ಬಹುಮಾನವನ್ನ ಬೈಚೇನಹಳ್ಳಿ ಅನುಸೂಯಮ್ಮ ನಟರಾಜು ಎಂಬುವರಿಗೆ ರೂ.30000 ನಗದು ಹಾಗೂ ಪಾರಿತೋಷಕ, ಎರಡನೇ ಬಹುಮಾನ ಪಾತಗನಹಳ್ಳಿ ಗ್ರಾಮದ ರಾಮಕ್ಕ ರಂಗಸ್ವಾಮಿಯ ಎಂಬವರಿಗೆ ಲಭಿಸಿದ್ದು 20,000 ನಗದು ಹಾಗೂ ಪಾರಿತೋಷಕ ನೀಡಲಾಯಿತು ತೃತೀಯ ಬಹುಮಾನವನ್ನು ಪಾತಗಾನಹಳ್ಳಿ ರಾಜೇಶ್ವರಿ ಶಿವಕುಮಾರ್ ಎಂಬವರಿಗೆ ಲಭಿಸಿದ್ದು ಅವರಿಗೆ ಹತ್ತು ಸಾವಿರ ನಗದು ಹಾಗೂ ಪಾರತೋಷಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ ಹೈನುಗಾರಿಕೆ ಗ್ರಾಮೀಣ ಆರ್ಥಿಕತೆಯ ಬೆನ್ನೆಲು ಬಾಗಿದೆ, ಇಂತಹ ಸ್ಪರ್ಧೆಗಳು ರೈತರಿಗೆ ಪ್ರೇರಣೆ ನೀಡುವುದರ ಜೊತೆಗೆ, ಪಶುಸಂಗೋಪನೆಯ ಮಹತ್ವವನ್ನು ಮತ್ತಷ್ಟು ಜನರಿಗೆ ತಲುಪಿಸುತ್ತವೆ ಜೊತೆಗೆ, ಯುವಕರು ಕೃಷಿ ಹಾಗೂ ಪಶುಸಂಗೋಪನೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ತುಮಕೂರು ಹಾಲು ಒಕ್ಕೂಟದ ತಾಲೂಕು ನಿರ್ದೇಶಕ ಸಿದ್ದಗಂಗಯ್ಯ ಮಾತಾಡಿ, ಹೈನುಗಾರಿಕೆ ತಾಲ್ಲೂಕಿನ ಜನರ ಬೆನ್ನೆಲುಬಾಗಿದ್ದು, ಹಾಲನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳಿಗೆ ಯಾವುದೇ ಸಮಸ್ಯೆ ಇದ್ದರೂ ನನ್ನ ಸಹಕಾರ ಇರುತ್ತದೆ ಇಲಾಖೆಯಿಂದ ಸಿಗುವಂತ ಸೌಲಭ್ಯಗಳನ್ನ ರೈತರು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ರೈತರಿಗೆ ತಿಳಿಸಿದರು.
ಹೈನುಗಾರಿಕೆಗೆ ಸಂಬಂಧಪಟ್ಟಂತ ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿಸಲಿದ್ದು ಈ ಬಾರಿ 40 ರಿಂದ 50 ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಲಾಗುವುದು ಎಂದು ಅಭಿಪ್ರಾಯಪಟ್ಟರು.
ಶಿರಾ ತಾಲ್ಲೂಕಿನ ನಿರ್ದೇಶಕರಾದ ಎಸ್.ಆರ್.ಗೌಡ ಮಾತನಾಡಿ ಹೈನುಗಾರಿಕೆಗೆ ಸಂಬಂಧಪಟ್ಟಂತ ಇಂತಹ ಕಾರ್ಯಕ್ರಮಗಳು ನಮ್ಮ ಪರಂಪರೆಯನ್ನು ಉಳಿಸುವುದಲ್ಲದೆ, ರೈತರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದರು.
ತುಮಕೂರು ಪಶು ಇಲಾಖೆ ಉಪ ನಿರ್ದೇಶಕ ಡಾ. ಎಚ್.ಎಮ್.ಶಿವಪ್ರಸಾದ್ ಮಾತನಾಡಿ, ಪಶುಪಾಲನೆ ಇಂದು ರೈತರ ಆರ್ಥಿಕ ಸ್ಥಿರತೆಗೆ ಮಹತ್ವದ ಆಧಾರವಾಗಿದೆ. ಉತ್ತಮ ತಳಿ ಅಭಿವೃದ್ಧಿ, ಸಮರ್ಪಕ ಆಹಾರ ಮತ್ತು ವೈಜ್ಞಾನಿಕ ನಿರ್ವಹಣೆಯಿಂದ ಹಾಲು ಉತ್ಪಾದನೆಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದು. ಸರ್ಕಾರದ ವಿವಿಧ ಯೋಜನೆಗಳನ್ನು ಪಶು ಪಾಲಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇಂತಹ ಸ್ಪರ್ಧೆಗಳು ರೈತರಲ್ಲಿ ಉತ್ತೇಜನವನ್ನು ಮೂಡಿಸುವುದರ ಜೊತೆಗೆ ಗುಣಮಟ್ಟದ ಪಶುಪಾಲನೆಗೆ ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹಾಲು ಒಕ್ಕೂಟದ ಮಧುಗಿರಿ ನಾಗೇಶ್ ಬಾಬು, ಚಂದ್ರಶೇಖರ್ ರೆಡ್ಡಿ ಜೆಡಿಎಸ್ ತಾಲೂಕು ಅಧ್ಯಕ್ಷ ಕಾಮರಾಜು, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಸುಧಾಕರ್ ಎಂ ಎಸ್, ವ್ಯವಸ್ಥಾಪಕರಾದ ಶ್ರೀನಿವಾಸ್, ಉಪ ವ್ಯವಸ್ಥಾಪಕರಾದ ದೀಕ್ಷಿತ್, ಕೆಎಂಎಫ್ ತಾಲೂಕ ಘಟಕದ ಮುಖ್ಯಸ್ಥೆ ಪುಷ್ಪಲತಾ, ವಿಸ್ತರಣಾಧಿಕಾರಿ ಬಶೀರಾ, ಎಲೆರಾಂಪುರ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ವೈವಿ ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


