ತುಮಕೂರು: ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ, ಬಡವರ ನೋವನ್ನು ತಮ್ಮ ಬರವಣಿಗೆಯ ಮೂಲಕ ಜಗತ್ತಿಗೆ ಸಾದರಪಡಿಸಿದ ಸಾಹಿತ್ಯ ಲೋಕದ ಅಪ್ರತಿಮ ದೈತ್ಯ ಪ್ರತಿಭೆ ದಲಿತ ಕವಿ ಡಾ. ಸಿದ್ದಲಿಂಗಯ್ಯನವರ ಜನ್ಮ ದಿನಾಚರಣೆಯನ್ನು ನಗರದ ಅಮಾನಿಕೆರೆ ಗಾಜಿನ ಮನೆಯ ಆವರಣದಲ್ಲಿ ಆಚರಿಸಲಾಯಿತು.
ದಲಿತ ಕವಿ ಸಿದ್ಧಲಿಂಗಯ್ಯರವರ ಕುರಿತು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡುತ್ತಾ, ಕಾವ್ಯವನ್ನೇ ಖಡ್ಗವಾಗಿಸಿಕೊಂಡು ದಲಿತರ ಪರವಾಗಿ ಸಾಮಾಜಿಕ ಸಮಾನತೆಗಾಗಿ ತಮ್ಮ ಬದುಕಿನದ್ದಕ್ಕೂ ಹೋರಾಟ ನಡೆಸಿದ ಕನ್ನಡದ ಹೆಮ್ಮೆಯ ಬಂಡಾಯ ಕವಿಯಾಗಿದ್ದವರು ಡಾ.ಸಿದ್ದಲಿಂಗಯ್ಯನವರು. ಅವರು ಬಡ ಕುಟುಂಬವೊಂದರಲ್ಲಿ ದೇವಯ್ಯ ಮತ್ತು ವೆಂಕಟಮ್ಮನವರ ಪುತ್ರರಾಗಿ 1954ರ ಫೆಬ್ರವರಿ ೩ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದರು.
ಪ್ರೊ. ಜಿ.ಎಸ್. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ `ಗ್ರಾಮದೇವತೆಗಳು’ ಎಂಬ ಪ್ರೌಢ ಪ್ರಬಂಧವನ್ನು ಮಂಡಿಸಿ 1989ರಲ್ಲಿ ಪಿಎಚ್.ಡಿ. ಪದವಿಯನ್ನು ಗಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಸಿದ್ಧಲಿಂಗಯ್ಯನವರು, ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಮಾಜದಲ್ಲಿನ ಅಸಮಾನತೆಗಳ ಬಗ್ಗೆ ತಮ್ಮೊಳಗೆ ಮೊಳೆಯುತ್ತಿದ್ದ ಸಿಟ್ಟು, ಆಕ್ರೋಶಗಳನ್ನು ವ್ಯಕ್ತಿಪಡಿಸಲು ಸಿದ್ಧಲಿಂಗಯ್ಯನವರು ಆಯ್ದುಕೊಂಡದ್ದು ಕಾವ್ಯ ಮಾಧ್ಯಮ. ಹೀಗೆ ಅವರು ಬರೆದ ಹಲವಾರು ಕವನಗಳ ಸಂಕಲನ `ಹೊಲೆಮಾದಿಗರ ಹಾಡು’ 1975ರಲ್ಲಿ ಪ್ರಕಟಗೊಂಡಿತು. ಮುಂದೆ ಅವರ `ಸಾವಿರಾರು ನದಿಗಳು’, `ಕಪುö್ಪಕಾಡಿನ ಹಾಡು’, `ಮೆರವಣಿಗೆ’, `ನನ್ನ ಜನಗಳು ಮತ್ತು ಇತರ ಕವಿತೆಗಳು’, `ಆಯ್ದ ಕವನಗಳು’ ಮುಂತಾದ ಕವನ ಸಂಕಲನಗಳು ಪ್ರಕಟಗೊಂಡಿವೆ, ಇಂತಹ ಮಹಾನ್ ಚೇತನರ ಜನ್ಮ ದಿನಾಚರಣೆಯನ್ನು ಮಾಡುತ್ತಾ ಅವರು ಸಮಾಜಕ್ಕಾಗಿ ಮಾಡಿರುವ ಸೇವಾ ಕಾರ್ಯಗಳನ್ನು ನೆನೆಯುವುದಕ್ಕೆ ಬಹಳ ಗರ್ವವೆನ್ನಿಸುತ್ತದೆ ಎಂದರು.
ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್ ಮಾತನಾಡುತ್ತಾ ಸಿದ್ಧಲಿಂಗಯ್ಯನವರ `ಪಂಚಮ ಮತ್ತು ನೆಲಸಮ’, `ಏಕಲವ್ಯ’ ಪ್ರಮುಖ ನಾಟಕಗಳು, ಇವಲ್ಲದೆ ರಸಗಳಿಗೆಗಳು, ಎಡಬಲ, ಹಕ್ಕಿನೋಟ, ಜನಸಂಸ್ಕೃತಿ ಉರಿಕಂಡಾಯ ಮುಂತಾದ ಲೇಖನಗಳನ್ನು ಬರೆದ ಖ್ಯಾತಿ ಅವರಿಗೆದೆ ಅವರ `ಊರು ಕೇರಿ’ ಆತ್ಮಕಥೆ ಇಂಗ್ಲಿಷ್ ಹಾಗೂ ತಮಿಳಿಗೂ ಅನುವಾದಗೊಂಡಿದ್ದು ಇಂಗ್ಲಿಷ್ ಅನುವಾದವನ್ನು ಕೇಂದ್ರ ಸಾಹಿತ್ಯ ಅಕಾಡಮಿಯು ಪ್ರಕಟಿಸಿದೆ. ಅವರ ಹಲವಾರು ಕವಿತೆಗಳು ಇಂಗ್ಲಿಷ್, ಹಿಂದಿ, ತಮಿಳು, ಬಂಗಾಳಿ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಅನುವಾದಗೊಂಡಿವೆ, ನಮ್ಮ ರಾಜ್ಯಕ್ಕೆ ಅತ್ಯಂತ ಕೀರ್ತಿ ತಂದುಕೊಟ್ಟ ಮಹಾನ್ ಕವಿ ಆಗಿದ್ದರು, ಅವರು ಅಪಾರ ದಲಿತ ವಿದ್ಯಾಮಣಿಗಳಿಗೆ ಕೀರ್ತಿಪ್ರದಾಯಕರೂ ಸಹ ಹೌದು ಎಂದರು.
ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಎಸ್.ಲಕ್ಷ್ಮೀನಾರಾಯಣರವರು ಮಾತನಾಡಿ, ಸಿದ್ಧಲಿಂಗಯ್ಯನವರ ಸೃಜನಶೀಲ ಸಾಹಿತ್ಯ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ.ಅಂಬೇಡ್ಕರ್ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ, ಬಾಬು ಜಗಜೀವನ ರಾಮ್ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಸಂದಿದ್ದವು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ತುಮಕೂರು ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎನ್., ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ ಎಸ್., ಯುವ ಘಟಕದ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಅಟ್ರಾಸಿಟಿ ಕಮಿಟಿ ಸದಸ್ಯರಾದ ಗೋವಿಂದರಾಜ್ ಕೆ., ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಟೈಲರ್ ಜಗದೀಶ್, ಯುವ ಘಟಕದ ಕಾರ್ಯಾಧ್ಯಕ್ಷರಾದ ಮಾರ್ಗೋ ವೆಂಕಟೇಶ್ ಕೊತ್ತಿಹಳ್ಳಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ತ್ಯಾಗರಾಜ್ ಕೆ., ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷರಾದ ಹನುಮನರಸಯ್ಯ, ಮುಖಂಡರುಗಳಾದ ನಟರಾಜ್ ಜಿ.ಎಲ್., ಇಲ್ಲಾಸ್ ಅಹಮದ್, ನಿರಂಜನ್, ಮಾರ್ಕೆಟ್ ಮಣ್ಣೆಪ್ಪ, ರಂಗಸ್ವಾಮಯ್ಯ ಕೊತ್ತಿಹಳ್ಳಿ, ಮಂಜುನಾಥ್, ಟಿ.ಎನ್. ನರಸಿಂಹಮೂರ್ತಿ, ಮೋಯಿನ್ ಅಹಮದ್, ಇನ್ನು ಮುಂತಾದವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


