ತುಮಕೂರು: ಸಬ್ಸಿಡಿ ರೂಪದಲ್ಲಿ ಸಾಲ ನೀಡುವುದಾಗಿ ಜನರನ್ನು ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ದೊಡ್ಡ ಜಾಲವೊಂದನ್ನು ತುಮಕೂರು ನಗರದ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಮಹತ್ವದ ಮಾಹಿತಿಗಳನ್ನು ಕಲೆಹಾಕಲಾಗಿದೆ.
ಏನಿದು ಪ್ರಕರಣ? ಬಂಧಿತ ಆರೋಪಿಗಳು ಎಕ್ಸಿಸ್ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್‌ಗಳ ಹೆಸರಿನಲ್ಲಿ ಜನರನ್ನು ಸಂಪರ್ಕಿಸುತ್ತಿದ್ದರು. ತುಮಕೂರಿನ ಒಬ್ಬ ಆರೋಪಿ ಹಾಗೂ ಬೆಂಗಳೂರಿನ ಮತ್ತೊಬ್ಬ ವ್ಯಕ್ತಿ ಸೇರಿ ಈ ಕೃತ್ಯ ಎಸಗುತ್ತಿದ್ದರು. ಬೆಂಗಳೂರಿನ ಆರೋಪಿಯು ಸಾವಿರಾರು ಜನರ ಮೊಬೈಲ್ ಸಂಖ್ಯೆಗಳನ್ನು ಒದಗಿಸುತ್ತಿದ್ದನು. ಈ ಸಂಖ್ಯೆಗಳಿಗೆ ಕರೆ ಮಾಡುತ್ತಿದ್ದ ತುಮಕೂರಿನ ಆರೋಪಿಯು, “ನಿಮಗೆ ಸಬ್ಸಿಡಿ ದರದಲ್ಲಿ ಸಾಲ ಮಂಜೂರಾಗಿದೆ” ಎಂದು ಆಮಿಷ ಒಡ್ಡುತ್ತಿದ್ದನು.
ಟೆಲಿ ಕಾಲರ್ ಗಳ ಬಳಕೆ: ಸಾಲದ ಬಗ್ಗೆ ವಿವರಿಸಲು ಆರೋಪಿಗಳು ಮಹಿಳೆಯರನ್ನು ಟೆಲಿ ಕಾಲರ್ ಗಳಾಗಿ ನೇಮಿಸಿಕೊಂಡಿದ್ದರು. ಅವರು ಬ್ಯಾಂಕ್ ಅಧಿಕಾರಿಗಳಂತೆ ಮಾತನಾಡಿ ಜನರನ್ನು ನಂಬಿಸುತ್ತಿದ್ದರು.
ಪ್ರಕ್ರಿಯೆ ಶುಲ್ಕದ ಹೆಸರಲ್ಲಿ ಹಣ: ಸಾಲ ಪಡೆಯಲು ಒಪ್ಪಿದವರಿಂದ ಫೈಲ್ ಚಾರ್ಜ್, ಇನ್ಶೂರೆನ್ಸ್ ಮೊತ್ತ ಹಾಗೂ ಪ್ರಕ್ರಿಯೆ ಶುಲ್ಕದ ಹೆಸರಿನಲ್ಲಿ ಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ನ (ಕೊರಟಗೆರೆ ತಾಲ್ಲೂಕಿನ ತೀತಾ ಶಾಖೆ) ಖಾತೆಗೆ ಹಾಕಿಸಿಕೊಳ್ಳುತ್ತಿದ್ದರು. ಒಮ್ಮೆ ಹಣ ವರ್ಗಾವಣೆಯಾದ ನಂತರ ಆರೋಪಿಗಳು ಸಂತ್ರಸ್ತರ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುತ್ತಿದ್ದರು.
ಆರೋಪಿಗಳು ಬಳಸುತ್ತಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಒಂದೇ ಖಾತೆಯ ವಿರುದ್ಧ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಲ್ಲಿ ಒಟ್ಟು 18 ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಈ ಜಾಲವು ಒಂದು ‘ಚೈನ್ ಲಿಂಕ್’ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದು, ಇನ್ನು ಅನೇಕರು ಇದರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಲಕ್ಷಾಂತರ ರೂಪಾಯಿ ವಂಚನೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಿದ್ದು, ತನಿಖೆ ಮುಂದುವರಿದಿದೆ.
ಸಾರ್ವಜನಿಕರಿಗೆ ಎಚ್ಚರಿಕೆ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವ ಆಮಿಷಕ್ಕೆ ಒಳಗಾಗಿ ತುಮಕೂರಿನ ವ್ಯಕ್ತಿಯೊಬ್ಬರು ₹16.81 ಲಕ್ಷ ಕಳೆದುಕೊಂಡಿರುವ ಮತ್ತೊಂದು ಪ್ರಕರಣವೂ ವರದಿಯಾಗಿದೆ. ಸಾರ್ವಜನಿಕರು ಅಪರಿಚಿತ ಕರೆಗಳು ಅಥವಾ ಸೋಷಿಯಲ್ ಮೀಡಿಯಾ ಜಾಹೀರಾತುಗಳನ್ನು ನಂಬಿ ಹಣ ವರ್ಗಾಯಿಸಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


