ತುಮಕೂರು: ಕೆರೆಗಳ ಗೋಡು ಮಣ್ಣನ್ನು ತಮ್ಮ ತೋಟಗಳಿಗೆ ಹಾಕಿಕೊಳ್ಳಲು ರೈತರಿಗೆ ಅನುಮತಿ ನೀಡಬೇಕು. ಕೈಗಾರಿಕೆ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ಕೈಬಿಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಒಳಗೊಂಡಂತೆ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರುಸೇನೆಯ ರಾಜ್ಯ ಸಂಚಾಲಕ ಆನಂದ ಪಟೇಲ್ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೈಗಾರಿಕೆಗಳ ಅಭಿವೃದ್ಧಿ ಹೆಸರಿನಲ್ಲಿ ಕೆಐಎಡಿಬಿ ಎಂಬ ಸಂಸ್ಥೆಯ ಮೂಲಕ ರೈತರ ಫಲವತ್ತಾದ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಸ್ವಾಧೀನ ಪಡಿಸಿಕೊಂಡು ಕೆಲವು ವರ್ಷಗಳ ನಂತರ ಉದ್ದಿಮೆದಾರರಿಗೆ ಮಾರಾಟ ಮಾಡುವ ಮೂಲಕ ರಿಯಲ್ ಎಸ್ಟೇಟ್ ದಂಧೆಗೆ ಕುಮ್ಮಕ್ಕು ನೀಡುತ್ತಿದೆ. ಅನ್ನ ಬೆಳೆಯುವ ರೈತನ ಬಳಿ ಭೂಮಿ ಇರಬೇಕೇ ಹೊರತು, ಉದ್ದಿಮೆದಾರರ ಬಳಿ ಅಲ್ಲ. ಸರ್ಕಾರ ಕೆಐಎಡಿಬಿ ಮೂಲಕ ಇದುವರೆಗೂ ರೈತರಿಂದ ಕೈಗಾರಿಕೆಗಳಿಗೆ ವಶಪಡಿಸಿಕೊಳ್ಳಲಾದ ಭೂಮಿ, ಸ್ಥಾಪನೆಯಾದ ಕೈಗಾರಿಕೆಗಳು, ಕೆಲಸ ಮಾಡುತ್ತಿರುವ ಉದ್ಯೋಗಿಗಳ ವಿವರ ನೀಡಲಿ. ಸರ್ಕಾರ ಈ ವಿಚಾರವಾಗಿ ಮೊದಲು ಶ್ವೇತ ಪತ್ರ ಒದಗಿಸಬೇಕು ಎಂದರು.
ನಗರದ ಟೌನ್‌ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ಕುಣಿಗಲ್, ಗುಬ್ಬಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ ಹಾಗೂ ಜಿಲ್ಲೆಯ ಇತರ ತಾಲೂಕುಗಳ ರೈತರು, ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿದರು.
ಈ ಸರ್ಕಾರ ಬಂದು ಮೂರು ವರ್ಷ ಕಳೆದರೂ ಒಂದೇ ಒಂದು ಬಗರ್‌ಹುಕುಂ ಕಮಿಟಿ ಸಭೆ ನಡೆಸಿಲ್ಲ. ಮೂರು ತಲೆಮಾರಿನಿಂದಲೂ ಸರ್ಕಾರಿ ಭೂಮಿ ಉಳುಮೆ ಮಾಡುತ್ತಾ ಫಾರಂ ನಂಬರ್ 50, 53 ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಮಂಜೂರಾತಿ ನೀಡಿಲ್ಲ. ಬದಲಾಗಿ ಅರಣ್ಯ ಇಲಾಖೆಯ ಮೂಲಕ ಬಗರ್ ಹುಕುಂ ರೈತರಿಗೆ ಕಿರುಕುಳ ನೀಡಿ ಒಕ್ಕಲೆಬ್ಬಿಸಲು ಹೊರಟಿದೆ. ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡದೆ, ಅರ್ಹರಿಗೆ ಸಾಗುವಳಿ ಚೀಟಿ ನೀಡಿ, ತಲೆಮಾರುಗಳಿಂದ ಉಳುಮೆ ಮಾಡುತ್ತಿರುವ ಜನರಿಗೆ ನ್ಯಾಯ ಒದಗಿಸಬೇಕು. ಹಾಗೆಯೇ ಎತ್ತಿನ ಹೊಳೆ, ಭದ್ರಾ ಮೇಲ್ದಂಡೆ ಬೇಗ ಪೂರ್ಣಗೊಳಿಸುವುದು ಮತ್ತು ಹೇಮಾವತಿ ಯೋಜನೆಯಿಂದ ನಿಗದಿತ 24.08 ಟಿ.ಎಂ.ಸಿ ನೀರು ತರಲು ಅಗತ್ಯ ಕ್ರಮವನ್ನು ಜಿಲ್ಲಾಡಳಿತ ಕೈಗೊಳ್ಳಬೇಕೆಂದು ರೈತರು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ನೀರಿನ ಮೂಲಗಳಾದ ಕೆರೆ ಕಟ್ಟೆಗಳಲ್ಲಿ ಇಂದು ಹೂಳು ತುಂಬಿದೆ. ರೈತರ ಜಮೀನಿನಲ್ಲಿದ್ದ ಮಣ್ಣು ಮಳೆಗಾಲದಲ್ಲಿ ನೀರಿನೊಂದಿಗೆ ಕೆರೆ ಸೇರುತ್ತಿದೆ. ಕೆರೆಯ ಹೂಳು ಮಣ್ಣಿನ ಮೇಲೆ ರೈತರಿಗೆ ಹಕ್ಕಿದೆ. ಆದರೆ ಸರ್ಕಾರ ಕ್ಯೂಬಿಕ್ ಮೀಟರ್ ಲೆಕ್ಕದಲ್ಲಿ ಕೆರೆಯ ಗೋಡು ಮಣ್ಣನ್ನು ಮಾರಿಕೊಳ್ಳಲು ಹೊರಟಿದೆ. ಇಟ್ಟಿಗೆ ಫ್ಯಾಕ್ಟರಿಗಳ ಮಾಲೀಕರಿಗೆ ಕೆರೆಯ ಮಣ್ಣು ಮಾರಿ, ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ರಾಗಿ ಖರೀದಿಯಲ್ಲಿ ಆಗುತ್ತಿರುವ ತೊಂದರೆಯನ್ನು ಸರಿಪಡಿಸಿ ಎಂದು ಹಸಿರು ಸೇನೆಯ ರಾಜ್ಯ ಸಂಚಾಲಕ ಆನಂದ ಪಟೇಲ್ ಒತ್ತಾಯ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


